ರಾಮನಗರ: ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಶ್ರದ್ಧೆ ಹಾಗೂ ಗೌರವ ಭಾವನೆ ಮೈಗೂಡಿಸಿಕೊಂಡು ಪರಿಶ್ರಮ ಪಟ್ಟರೆ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಲಿದೆ ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸಿ ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು. ಗುರು ಹಿರಿಯರಿಗೆ ಗೌರವ ಸಲ್ಲಿಸಬೇಕು. ವಿದ್ಯಾರ್ಥಿ ಜೀವನದಲ್ಲಿ 5 ವರ್ಷ ಶ್ರಮಪಟ್ಟರೆ ಮುಂದಿನ 50 ವರ್ಷಗಳವರೆಗೆ ಉತ್ತಮ ಜೀವನ ನಡೆಸಬಹುದು ಎಂದರು.ಸರಕಾರಿ ಶಾಲೆಯ ಮಕ್ಕಳಲ್ಲಿ ಶಿಸ್ತಿನ ಕೊರತೆ ಇದೆ ಎಂಬ ಆರೋಪವಿದೆ. ಆ ಕಳಂಕವನ್ನು ತೊಳೆದು ಹಾಕಬೇಕು. ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಪೈಕಿ ಬಹುತೇಕರು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದವರೇ ಆಗಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇದಕ್ಕೂ ಮೀರಿದ ಸೌಲಭ್ಯಗಳನ್ನು ಈ ಕಾಲೇಜಿನಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು, ಸಮಾಜ ಸೇವಕರು ನೀಡಲಿದ್ದಾರೆ. ಆರ್ಥಿಕ ಸಮಸ್ಯೆ ವಿದ್ಯಾರ್ಥಿಯ ಶೈಕ್ಷಣಿಕ ಬದುಕನ್ನು ಮೊಟುಕುಗೊಳಿಸಬಾರದು ಎಂಬ ಉದ್ದೇಶದಿಂದ ಅಗತ್ಯ ಎಲ್ಲಾ ಸಹಾಯ ನೀಡಲು ನಾನು ಬದ್ಧನಿದ್ದೇನೆ.ಈಗ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ್ದೇವೆ. ಇದನ್ನು ಹೊಲಿಸಿಕೊಳ್ಳಲು ಸಾಧ್ಯವಾಗದಿದ್ದರೂ ನಾವೇ ಹೊಲಿಸಿಕೊಡುತ್ತೇವೆ. ಕಾಲೇಜು ಕಂಪ್ಯೂಟರ್ ಲ್ಯಾಬ್‌ಗೆ ಕಂಪ್ಯೂಟರ್ ಸೌಲಭ್ಯ ಒದಗಿಸಿ ಕೊಡುತ್ತೇವೆ. ಶಾಲೆಗೆ ಶುಲ್ಕ ಕಟ್ಟಲು ಸಾಧ್ಯವಾಗದಿದ್ದರೆ ಇದಕ್ಕೂ ನೆರವು ನೀಡುತ್ತೇನೆ. ಒಟ್ಟಾರೆ ಉತ್ತಮ ಫಲಿತಾಂಶ ಪಡೆದು ಸರ್ಕಾರಿ ಕಾಲೇಜಿನ ಕೀರ್ತಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಈ ಹಿಂದೆ ಸರ್ಕಾರಿ ಕಾಲೇಜುಗಳು ಸುಸಜ್ಜಿತ ಕಟ್ಟಡ ಸೇರಿದಂತೆ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿತ್ತು. ಇದೀಗ ಕಾಲ ಬದಲಾಗಿದೆ. ಖಾಸಗಿ ಕಾಲೇಜುಗಳಿಗೆ ಮೀರಿದ ಸೌಲಭ್ಯಗಳು ಸರ್ಕಾರಿ ಕಾಲೇಜುಗಳಲ್ಲಿ ದೊರೆಯುತ್ತಿವೆ. ಸರ್ಕಾರಿ ಶಾಲೆಗಳ ಕುರಿತು ಇಲ್ಲಿ ಓದುವ ವಿದ್ಯಾರ್ಥಿಗಳೇ ವ್ಯಾಪಕ ಪ್ರಚಾರ ಮಾಡಬೇಕು. ಹೆಚ್ಚಿನ ಮಕ್ಕಳು ಶಾಲೆಗೆ ದಾಖಲಾಗುವಂತೆ ಸಹಕರಿಸಬೇಕು ಎಂದು ಎ.ಬಿ.ಚೇತನ್ ತಿಳಿಸಿದರು.ನಗರಸಭೆ ಸದಸ್ಯ ಬೈರೇಗೌಡ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳ ಶಿಕ್ಷಕರು - ಉಪನ್ಯಾಸಕರು ಹೆಚ್ಚು ಪ್ರತಿಭೆ, ಕೌಶಲ ಭರಿತರಾಗಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಅತ್ಯುತ್ತಮ ಫಲಿತಾಂಶ ನೀಡುವ ಮೂಲಕ ಉಪನ್ಯಾಸಕರು ಹಾಗೂ ಪೋಷಕರಿಗೆ ಕೀರ್ತಿ ತರುವಂತೆ ಸಲಹೆ ನೀಡಿದರು.
ದ್ವಿತೀಯ ಪಿಯುಸಿ ಜೀವನದ ದಿಕ್ಕು ಬದಲಾಯಿಸುವ ಘಟ್ಟವಾಗಿದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗದೆ, ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು. ಯಾರಾದರು ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗಿದ್ದರೆ ಅಂಥವರ ಬಗ್ಗೆ ಅವರ ಪೋಷಕರು ಹಾಗೂ ಉಪನ್ಯಾಸಕರ ಗಮನಕ್ಕೆ ತರಬೇಕೆಂದು ಕಿವಿಮಾತು ಹೇಳಿದರು.ಕಾಲೇಜು ಪ್ರಾಂಶುಪಾಲರಾದ ಅಸ್ಮಾ, ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಂಜಿತ್, ಉಪನ್ಯಾಸಕರಾದ ಮಾರಣ್ಣ, ಮುಖಂಡರಾದ ಗೌತಮ್ ಸೇರಿದಂತೆ ಬೋಧಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
25ಕೆಆರ್ ಎಂಎನ್ 3.ಜೆಪಿಜಿರಾಮನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಿದರು.