ರಾಮನಗರ: ಒಳ ಮೀಸಲಾತಿ ವಿಚಾರದಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯಲ್ಲಿ ಕೋಲಂಬೊ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಕೊರಮ, ಕೊರಚ, ಲಂಬಾಣಿ ಮತ್ತು ಭೋವಿ(ಕೋಲಂಬೊ) ಸಮಾಜಕ್ಕೆ ಒಳ ಮೀಸಲಾತಿಯಲ್ಲಿ ಶೇಕಡ 7ರಷ್ಟು ಮೀಸಲಾತಿ ಕೊಡಬೇಕೆಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಧನಂಜಯ ನಾಯಕ್, ಕೋಲಂಬೊ ಸಮಾಜದ ಜನಸಂಖ್ಯೆ ಬಲಗೈ ಹಾಗೂ ಎಡಗೈ ಸಮಾಜ ಜನಸಂಖ್ಯೆಕ್ಕಿಂತ ಹೆಚ್ಚಾಗಿದೆ. ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿಯೂ ಮಾದಿಗ ಸಮಾಜ ಮೊದಲನೆಯ ಸ್ಥಾನದಲ್ಲಿದೆ. ಎರಡು ದತ್ತಾಂಶವನ್ನು ಗಮನಿಸಿದಾಗ ಕೋಲಂಬೊ ಸಮಾಜ ಹಿಂದುಳಿದಿರುವುದು ವರದಿಯಿಂದ ಗೊತ್ತಾಗುತ್ತದೆ. ಅಲ್ಲದೆ, ಇನ್ನು ಸೌಲಭ್ಯದಿಂದ ವಂಚಿತರಾದ 59 ಜಾತಿಗಳನ್ನು ಕೊಲಂಬೊದೊಂದಿಗೆ ಸೇರಿಸಿದ್ದಾರೆ. ಹೀಗಾಗಿ ಈ ಸಮಾಜಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕಾದರೆ ಈ ಸಮಾಜಕ್ಕೆ ಶೇಕಡ 7ರಷ್ಟು ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಶೇಕಡವಾರು 17ರಷ್ಟು ಮೀಸಲಾತಿ ಏರಿಕೆ ಮಾಡಿರುವ ಕರ್ನಾಟಕ ಸರ್ಕಾರ, ಇದು ಕೇಂದ್ರ ಸರ್ಕಾರದಿಂದ ಸ್ವೀಕಾರ ಆಗಿದಿಯಾ?. ಸ್ಪರ್ಶ್ಯ ಹಾಗೂ ಅಸ್ಪುರ್ಶ್ಯ ಎಂಬ ಪದ ಕಾನೂನು ಬಾಹಿರವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಸಹ ಆ ಪದವನ್ನು ಬಳಕೆ ಮಾಡಲಾಗಿದ್ದು, ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಒಳ ಮೀಸಲಾತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ, ಆದರೂ ಮಾಡಲಾಗಿದೆ. ನ್ಯಾಯಮೂರ್ತಿ ನಾಗಮೋಹನ ದಾಸ್ ರವರ ವರದಿ ದೋಷಪೂರಿತವಾಗಿದೆ. ಈ ಎಲ್ಲ ಕಾರಣಕ್ಕಾಗಿ ಒಳ ಮೀಸಲಾತಿ ತರಾತುರಿಯಲ್ಲಿ ಮಾಡಬಾರದು. ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ಒಗ್ಗಟ್ಟು ಮುರಿಯುವ ಪ್ರಯತ್ನ :ರಾಷ್ಟ್ರೀಯ ಪ್ರೊಫೇಸರ್ ಗಳ ಸಂಘದ ರಾಜ್ಯಾಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ಕಾಣದ ಕೈಗಳು ಶೂದ್ರ, ದಲಿತ ಸಮುದಾಯಗಳ ಒಗ್ಗಟ್ಟನ್ನು ಒಡೆಯುವ ಪೂರ್ವಯೋಜಿತ ಪ್ರಯತ್ನವನ್ನು ನಮ್ಮವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಸ್ಪೃಶ್ಯ ಜಾತಿಗಳೆಂದು ಉಲ್ಲೇಖಿಸಿರುವುದು ವ್ಯವಸ್ಥಿತಿವಾಗಿ 63 ಸಮುದಾಯಗಳನ್ನು ಮೀಸಲಾತಿಯಿಂದ ತೆಗೆಯುವ ಹುನ್ನಾರವಾಗಿದೆ. ಇದರಿಂದ ರಾಜಕೀಯ ಮುಖಂಡರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ ಎಂದರು.
ಕೋಲಂಬೊ ಸಮಾಜವನ್ನು ಓಬಿಸಿಗೆ ಸೇರ್ಪಡೆ ಮಾಡುತ್ತಾರೆಂಬ ಆತಂಕವೂ ಇದೆ. ಬೇಡ ಮತ್ತು ಜಂಗಮ ಸಮಾಜವನ್ನು ನಮ್ಮ ಸಮುದಾಯದೊಂದಿಗೆ ಸೇರಿಸಿದ್ದಾರೆ. ಜಂಗಮ ಅಂದರೆ ಲಿಂಗಾಯತ ಸಮುದಾಯ ಬಲಿಷ್ಠವಾಗಿದೆ. ಆ ಸಮುದಾಯ ನಮ್ಮ ಸಮಾಜವನ್ನು ಎಲ್ಲ ಹಂತದಲ್ಲಿಯೂ ತುಳಿದು ಲಾಭ ಪಡೆಯುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣಕ್ಕೆ ನಾಗಮೋಹನ್ ದಾಸ್ ವರದಿ ಜಾರಿಗೊಳಿಸದೆ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಸಿದ್ಯಾನಾಯಕ್ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಅನ್ವಯ ರಾಜ್ಯ ಸರ್ಕಾರ ಎಲ್ಲಾ ಜಾತಿಗಳಿಗೆ ಒಳ ಮೀಸಲಾತಿ ನೀಡಿರುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಕೂಲಿ ಮಾಡುತ್ತಿರುವ ಲಂಬಾಣಿ ಸಮಾಜದ ಜೀವನ ಇನ್ನೂ ಸುಧಾರಣೆಯಾಗಿಲ್ಲ. ಈ ಸಮುದಾಯವನ್ನು ಮೀಸಲಾತಿಯಿಂದ ವಂಚಿಸುವ ಕೆಲಸ ನಡೆಯುತ್ತಿದೆ. ಕೇಂದ್ರ ಸರ್ಕಾರದ ಜಾತಿ ಗಣತಿ ವರದಿ ಬರುವವರೆಗೆ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ವರದಿ ಜಾರಿಗೊಳಿಸಬಾರದು ಎಂದು ತಿಳಿಸಿದರು.
ಲಂಬಾಣಿ ಸಮುದಾಯದ , ಮುಖಂಡರಾದ ಕೃಷ್ಣ ನಾಯಕ್ , ಪರಶುರಾಮ್ , ತುಳಸಿ ರಾಮನಾಯಕ್ , ಗೋವಿಂದ ನಾಯಕ್ , ನಾಗೇಂದ್ರ ನಾಯಕ್ , ಕೃಷ್ಣ ನಾಯಕ್ , ರಾಮಚಂದ್ರ ನಾಯಕ್ , ಆರ್. ಬಿ.ಶ್ರೀಧರ್, ಬಾಲು ನಾಯಕ್, ಶಿವರಾಮ್ ನಾಯಕ್ , ಸಿದ್ದರಾಜು ನಾಯಕ್ ಮತ್ತಿತರರು ಹಾಜರಿದ್ದರು.25ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.