ಕನ್ನಡಪ್ರಭ ವಾರ್ತೆ ಹಾಸನ
ನೂರು ವರ್ಷಗಳ ಇತಿಹಾಸವಿರುವ ರಾಚೇನಹಳ್ಳಿ ಸರ್ಕಾರಿ ಶಾಲೆಯು ಕಳೆದ 13 ವರ್ಷಗಳ ಹಿಂದೆ ವಿವಿಧ ಕಾರಣಗಳಿಗೆ ಮುಚ್ಚಿ ಹೋಗಿತ್ತು. ಈಗ ಊರಿನ ಜನರೆಲ್ಲರೂ ಸೇರಿ ಮತ್ತೆ ಮರುಜೀವ ನೀಡಿ ಅದೇ ಶಾಲೆಗೆ ಮಕ್ಕಳನ್ನು ಸೇರಿಸಿ ಹಸಿರು ತೋರಣ ಕಟ್ಟಿ ಹಬ್ಬದ ರೀತಿ ಶಾಲೆಗೆ ಚಾಲನೆ ನೀಡಿದ್ದಾರೆ.ತಾಲೂಕಿನ ಸಾಲಗಾಮೆ ರಸ್ತೆ, ಗ್ಯಾರಳ್ಳಿ ಬಳಿ ಇರುವ ರಾಚನಹಳ್ಳಿ ಗ್ರಾಮದಲ್ಲಿಯೇ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮುಚ್ಚಿ ಹೋಗಿತ್ತು. ಮಾಜಿ ಯೋಧರಾದ ಹನುಮಂತಪ್ಪ ಹಾಗೂ ಗ್ರಾಮಸ್ಥರು ಶ್ರಮವಹಿಸಿ ಶಿಕ್ಷಣಾಧಿಕಾರಿ, ಗ್ರಾಮಸ್ಥರ ನೆರವಿನಿಂದ ಸರ್ಕಾರಿ ಶಾಲೆ ಮತ್ತೆ ತೆರೆದಿರುವುದರಿಂದ ಗ್ರಾಮದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ಹಬ್ಬದಂತೆ ಮಾವಿನ ತೋರಣ, ಬಾಳೆಕಂದು ಕಟ್ಟಿ ಶಾಲೆ ಆವರಣ ಶೃಂಗರಿಸಿದ್ದಾರೆ.
ಇದೇ ವೇಳೆ ಮಾಜಿ ಯೋಧರಾದ ಹನುಮಂತಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಮಕ್ಕಳ ಕೊರತೆಯಿಂದಾಗಿ ಸರಕಾರಿ ಶಾಲೆ ಬಂದು ಆಗಿತ್ತು. ಅದನ್ನ ಪುನರಾರಂಬ ಮಾಡಬೇಕೆಂದು ಗ್ರಾಮದಿಂದ ಬೇರೆಡೆಗೆ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ಕರೆತಂದು ನಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಸೇರಿಸಲಾಗಿದೆ. ಇಷ್ಟು ವರ್ಷಗಳ ಕಾಲ ನಿಂತಿದ್ದ ಶಾಲೆ ಪುನರಾಂಭವಾಗಿರುವುದು ನಮ್ಮ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಿಕ್ಷಣಾಧಿಕಾರಿ ಭೇಟಿ ಮಾಡಿದಾಗ ಸ್ಪಂದಿಸಿದ್ದಾರೆ. ಮುಚ್ಚಿರುವ ಎಲ್ಲಾ ಸರ್ಕಾರಿ ಶಾಲೆಯನ್ನು ನಮ್ಮಂತೆ ತೆರೆದು ಸರ್ಕಾರಿ ಶಾಲೆಗಳ ಉಳಿವಿಗೆ ಉತ್ತೇಜನ ಕೊಡಬೇಕು ಎಂದು ಮನವಿ ಮಾಡಿದರು. ಶಾಲೆ ಮುಚ್ಚಿದ ವೇಳೆ ಈ ಜಾಗದಲ್ಲಿ ಗಣೇಶ ಇಡುವುದು, ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಜನೆ, ಎನ್.ಸಿ.ಸಿ. ಕ್ಯಾಂಪ್, ಎನ್.ಎಸ್.ಎಸ್. ಶಿಬಿರ ಇತರೆ ಶುಭ ಕಾರ್ಯಗಳಿಗೆ ಉಪಯೋಗಿಸುತ್ತಿದ್ದೆವು. ಇನ್ನು ಮುಂದೆ ಖಾಸಗಿ ಶಾಲೆಗಳ ವಾಹನ ಬಾರದಂತೆ ನೋಡಿಕೊಳ್ಳುತ್ತೇವೆ. ಖಾಸಗಿ ಶಾಲೆಯವರು ಡೊನೇಷನ್ ಇತರೆ ಹೇಳಿ ಪೋಷಕರನ್ನು ಮರಳು ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಿ ಮುಂದೆ ಸರ್ಕಾರಿ ಶಾಲೆ ಉಳಿಯಲಿದೆ ಎಂದು ಹೇಳಿದರು.
ತಾಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಯಕ್ ಮಾತನಾಡಿ, ಮಕ್ಕಳ ಕೊರತೆಯಿಂದಾಗಿ ಈ ಶಾಲೆ ಮುಚ್ಚಲಾಗಿತ್ತು. ಈಗ ಗ್ರಾಮಸ್ಥರ, ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ಶಾಲೆ ಪುನರಾಂಭವಾಗಿದೆ. ಶಾಸಕರು ಕೂಡ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದರು. ಕ್ಷೇತ್ರದ ಶಿಕ್ಷಣಾಧಿಕಾರಿಗಳು ಕೂಡ ಗ್ರಾಮಕ್ಕೆ ಭೇಟಿ ನೀಡಿ ಗುರುವಾರದಿಂದಲೇ ಮಕ್ಕಳಿಗೆ ಪಾಠವನ್ನು ಶುರು ಮಾಡಲಾಗುವುದು, ಬಿಸಿಯೂಟ, ಕ್ಷೀರಾಭಾಗ್ಯ, ಪೂರಕ ಪೌಷ್ಟಿಕ ಆಹಾರ ಎಲ್ಲಾವನ್ನು ಕೂಡ ಕೊಡಲಾಗುವುದು. ಇನ್ನು ಎರಡು ದಿನಗಳಲ್ಲಿ ಸಮವಶ್ತ್ರ, ಪುಸ್ತಕ ಸೇರಿದಂತೆ ಪ್ರತಿಯೊಂದನ್ನು ಕೊಡಲಾಗುವುದು ಎಂದರು. ಈ ಊರಿನ ಗ್ರಾಮಸ್ಥರು, ಹಳೆ ವಿದ್ಯಾರ್ಥೀಗಳು ಹಾಗೂ ನಿವೃತ್ತ ನೌಕರರು ಎಲ್ಲಾರು ಸೇರಿ ಉತ್ತಮ ಕೆಲಸ ಮಾಡಿದ್ದು, ಇದೆ ರೀತಿ ಮುಚ್ಚಿ ಹೋಗಿರುವ ಶಾಲೆಯನ್ನು ಗ್ರಾಮಸ್ಥರು ಮುಂದಾದರೇ ಎಲ್ಲಾ ಶಾಲೆಯನ್ನು ತೆರೆಯಲು ಇಲಾಖೆಗಳಿಂದ ಎಲ್ಲಾ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿ ಆ ಶಾಲೆಯನ್ನು ಬಲವರ್ಧನೆ ಮಾಡಲಾಗುವುದು ಎಂದು ಭರವಸೆ ನೀಡಿದರು.ರಾಚೇನಹಳ್ಳಿ ಗ್ರಾಮಸ್ಥರಾದ ಭರತ್, ಮಲ್ಲೇಗೌಡ, ಸಂತೋಷ್, ನಟರಾಜು, ಪುಟ್ಟೇಗೌಡ, ಕೃಷ್ಣೇಗೌಡ, ಬೆಟ್ಟೆಗೌಡ, ರಾಜೀವ್ ಗೌಡ, ನಾರಾಯಣ್, ದೇವರಾಜೇಗೌಡ, ರಾಮಣ್ಣ, ಲೋಹಿತ್, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ಬಿ.ಆರ್.ಎಸ್. ಲಿಲ್ಲಿ ಡಯಾನಾ, ಬಿ.ಆರ್.ಸಿ.ಮಲ್ಲೇಶ್, ದೈಹಿಕ ಶೀಕ್ಷಣಾಧಿಕಾರಿ ವೇದಣ್ಣ, ಸಿ.ಆರ್.ಪಿ. ರತ್ನಮ್ಮ, ಕಿರಣ್ ಇತರರು ಹಾಜರಿದ್ದರು.