ಆಲಮೇಲ: ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿ ಹೊಗಿದೆ ಮತ್ತು ಬೆಲೆ ಏರಿಕೆಯಿಂದ ಸಾಮಾನ್ಯ ಜನರನ್ನು ಸುಲಿಗೆ ಮಾಡುತ್ತಿದೆ. ಇಂತಹ ದುರಾಡಳಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಹಿಂದುಳಿದ ದಲಿತರಿಗೆ ಮೀಸಲಿದ್ದ ವಾಲ್ಮೀಕಿ ನಿಗಮದಲ್ಲಿನ ₹175 ಕೋಟಿ ಅನುದಾನ ತೆಲಂಗಾಣದ ಚುನಾವಣೆಗೆ ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡಿದೆ. ಇದರಿಂದ ಮನನೊಂದ ಅಧಿಕಾರಿ ಚಂದ್ರಶೇಕರ ಆತ್ಮಹತ್ಯ ಮಾಡಿಕೊಂಡಿದ್ದಾರೆ. ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊತ್ತು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಸಾವಿಗೆ ನ್ಯಾಯ ಒದಗಿಸಬೇಕು ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ₹175 ಕೊಟಿ ಬಹುದೊಡ್ಡ ಹಗರಣ ಮಾಡುವ ಮೂಲಕ ಭ್ರಷ್ಟಾಚಾರವೇ ಅವರ ಕಾಯಕ ಮಾಡಿಕೊಂಡು ರಾಜ್ಯದ ಜನರನ್ನು ವಂಚಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗಿಲ್ಲ. ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಖಜಾನೆ ಲೋಟಿ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದ ಸ್ಥಿತಿಗೆ ಬಂದೊದಗಿದೆ ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಎನ್. ಪಾಟೀಲ ಮಾತನಾಡಿದರು. ಮಂಡಲ ಬಿಜೆಪಿ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಶ್ರೀಶೈಲ ಗೌಡ ಮಾಗಣಗೇರಿ ಬಿರಾದಾರ, ಶಿವಾನಂದ ಮಾರ್ಸನಳ್ಳಿ, ಹರೀಶ ಎಂಟಮಾನ, ಈರಣ್ಣ ರಾವೂರ ಮುಂತಾದವರು ಮಾತನಾಡಿದರು.