ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಐದನೇ ಆವೃತ್ತಿಯಲ್ಲಿ ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗಿ 3.30 ಸಿಜಿಪಿಎಯೊಂದಿಗೆ ಎ+ ಗ್ರೇಡ್ ಪಡೆದಿದೆ.ಡಿ. 12 ಮತ್ತು 13 ರಂದು ಈ ಎರಡು ದಿನಗಳಂದು ನ್ಯಾಕ್ ಸಮಿತಿಯು ಕಾಲೇಜಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಿತ್ತು. ಉತ್ತರ ಪ್ರದೇಶದ ಅಲಹಾಬಾದ್ ವಿಶ್ವವಿದ್ಯಾಲಯದ ಅರ್ಥ್ ಮತ್ತು ಪ್ಲಾನೆಟರಿ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಜಯಂತ್ ನಾಥ್ ತ್ರಿಪಾಠಿ ಅವರು ಅಧ್ಯಕ್ಷರಾಗಿ, ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವೈ.ವಿ. ರಾಮಿರೆಡ್ಡಿ ಅವರು ಸದಸ್ಯ ಸಂಯೋಜಕರಾಗಿ, ತಮಿಳುನಾಡಿನ ಮಧುರೈನ ತ್ಯಾಗರಾಜರ್ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡಿಯರಾಜ ದುರೈಸ್ವಾಮಿ ಸದಸ್ಯರಾಗಿ ಸಮಿತಿಯಲ್ಲಿದ್ದರು.
ಕಾಲೇಜು ಕಳೆದ ಬಾರಿ ಮೌಲ್ಯಮಾಪನಕ್ಕೆ ಒಳಗಾದಾಗ 3.21 ಸಿಜಿಪಿಎಯೊಂದಿಗೆ ಎ ಗ್ರೇಡನ್ನು ಪಡೆದುಕೊಂಡಿತ್ತು. 1964 ರಲ್ಲಿ ಪ್ರಾರಂಭವಾದ ಈ ಕಾಲೇಜು ಜೆಎಸ್ಎಸ್ ಮಹಾವಿದ್ಯಾಪೀಠದ ಅಡಿಯಲ್ಲಿ ಪ್ರಾರಂಭವಾದ ಮೊದಲ ಕಾಲೇಜಾಗಿದೆ. ಪ್ರಸ್ತುತ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ವಾಯತ್ತತೆ, ಯುಜಿಸಿಯಿಂದ ಪ್ರಚ್ಛನ್ನ ಉತ್ಕೃಷ್ಟತಾ ಕಾಲೇಜು ಎಂದು ಗುರುತಿಸಿಕೊಂಡಿದೆ. ಯುಜಿಸಿಯಿಂದ ಕೌಶಲ್ ಕೇಂದ್ರ ಮತ್ತು ಕೌಶಲ್ಯ ಕರ್ನಾಟಕ ಸ್ಕೀಂನ ಅಡಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಹೊಂದಿದ್ದು ಕೌಶಲ್ಯಾಧಾರಿತವಾದ ಬಿ.ವೋಕ್, ಎಂ. ವೋಕ್ ಕೋರ್ಸ್ಗಳು ನಡೆಯುತ್ತಿವೆ. ಸುಮಾರು 60 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಕಾಲೇಜಿನಲ್ಲಿ ಇಂದು 3,718 ಮಂದಿ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ.ವಿವಿಧ ಸ್ನಾತಕ ಪದವಿ ಅಧ್ಯಯನದ ಜೊತೆಗೆ 15 ವಿಷಯಗಳಲ್ಲಿ ಸ್ನಾತಕೋತ್ತರ 11 ವಿಷಯಗಳಲ್ಲಿ ಸಂಶೋಧನಾ ವಿಭಾಗಗಳಿವೆ. ಈಗ ಕಾಲೇಜು ಉತ್ತಮ ಗ್ರೇಡನ್ನು ಪಡೆದುಕೊಂಡಿದ್ದು, ಅಧ್ಯಯನ ಮತ್ತು ಸಂಶೋಧನೆಯಲ್ಲಿ ಇನ್ನೂ ಹೆಚ್ಚಿನ ಸಾಧ್ಯತೆಗಳನ್ನು ಹೊಂದಲು ಸಹಾಯಕವಾಗಿದೆ.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಮತ್ತು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ, ಕಾರ್ಯದರ್ಶಿ ಪ್ರೊ. ಎಸ್.ಪಿ. ಮಂಜುನಾಥ್ ಹಾಗೂ ಆಡಳಿತವರ್ಗದವರ ಮಾರ್ಗದರ್ಶನ, ಐಕ್ಯುಎಸಿ, ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗದವರ ಪರಿಶ್ರಮದಿಂದ ಕಾಲೇಜು ಈ ಬೆಳವಣಿಗೆ ಹೊಂದಿದೆ ಎಂದು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮತ್ತು ಪ್ರಾಂಶುಪಾಲ ಡಾ. ಎಂ. ಪ್ರಭು ತಿಳಿಸಿದ್ದಾರೆ.