ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ವಾಸ್ತು ಹಾಗೂ ನವಗ್ರಹ ಹೋಮಗಳು ಜರುಗಿದವು. ಮಂಗಳವಾರ ಬೆಳಗ್ಗೆ ನವಕಲಾ ಹೋಮ, ಕ್ಷೇತ್ರಾಧಿದೇವತೆ ಹಾಗೂ ಪರಿವಾರ ದೇವತೆಗಳಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ರಾಜೋಪಚಾರ, ಪ್ರಸನ್ನ ಮಹಾಪೂಜೆ ಹಾಗೂ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಕಟಪಾಡಿಯ ಬ್ರಹ್ಮಶ್ರೀಧರ ಶರ್ಮಾ ಹಾಗೂ ಬಾಳಕೃಷ್ಣ ಕಡ್ಲಾಸ್ಕರ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ: ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಮಹಿಳೆಯರಿಂದ ರಥೋತ್ಸವ: ಸಂಜೆ ಸಕಲ ಮಂಗಳವಾದ್ಯ ಹಾಗೂ ವೇದಘೋಷಗಳ ನಡುವೆ ವಿಶೇಷವಾಗಿ ಅಲಂಕರಿಸಲಾಗಿದ್ದ ಕಾಳಿಕಾಂಬಾದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಮಹಿಳೆಯರೇ ರಥವನ್ನು ಎಳೆಯುವ ಮೂಲಕ ಗಮನ ಸೆಳೆದರು. ರಥೋತ್ಸವದ ವೇಳೆ ಭಕ್ತರು ಭಕ್ತಿ-ಭಾವದಿಂದ ಪಾಲ್ಗೊಂಡರು.
ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ: ಬ್ರಹ್ಮಾಂಡಬೇರಿ ಮಠದ ಡಾ. ಸುಧೀಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. 50ನೇ ವರ್ಷದ ವಿವಾಹ ಜೀವನ ಪೂರೈಸಿದ ಹಿರಿಯ ದಂಪತಿಗಳು ಹಾಗೂ ದಾನಿಗಳನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.