ಕನ್ನಡಪ್ರಭ ವಾರ್ತೆ ಚನ್ನಗಿರಿ
ನ.30ರ ಭಾನುವಾರ ರಾತ್ರಿ ಇಲ್ಲಿನ ಗಣಪತಿ ವೃತ್ತದಲ್ಲಿರುವ ಶ್ರೀ ಪಾಂಡುರಂಗ ವಿಠಲ ದೇವಾಲಯದಲ್ಲಿ ಪೋತಿ ಸ್ಥಾಪನೆ ಮಾಡಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಡಿ.1ರ ಸೋಮವಾರ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ನಾಮ, ಜಪ, ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ರಾತ್ರಿ 10.30ರಿಂದ ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ ಸಿದ್ದಾಪುರದ ಸುದೀರ್ ಬೇಂಗ್ರೆ ಇವರು ಸಂತವಾಣಿ, ಪಂಡರಿ ಸಂಪ್ರದಾಯಿಕ ಕೀರ್ತನೆಯನ್ನು ಹನುಮಂತರಾವ್ ರಂಗಧೋಳ್, ಪ್ರವಚನವನ್ನು ಮಂಜಪ್ಪರಾವ್ ಪುಂಡಲೀಕರಾವ್ ನಡೆಸಿಕೊಟ್ಟರು.ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ 11.30ರ ವರೆಗೆ ಶ್ರೀ ಪಾಂಡುರಂಗ ವಿಠಲ ದೇವರ ಮೂರ್ತಿಯನ್ನು ಹೂವಿನ ಅಲಂಕಾರಗಳೊಂದಿಗೆ ಸಿಂಗಾರ ಗೊಂಡ ಬೆಳ್ಳಿಯ ಸಾರೋಟಿನಲ್ಲಿ ಕುಳ್ಳಿರಿಸಿಕೊಂಡು ತಾಳ, ಮೃದಂಗ, ವೀಣಾ, ಬಾಳ ಗೋಪಾಲ ನಾದದೊಂದಿಗೆ ಕಲಾಕೀರ್ತನೆಯನ್ನು ಮಾಡುತ್ತ ರಾಜಬೀದಿ ಉತ್ಸವ ನಡೆಸಲಾಯಿತು.
ನಂತರ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಳೆದ 3 ದಿನಗಳಿಂದ ನಡೆದ ದಿಂಡಿ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀ ಭಾವಸಾರ ಕ್ಷತ್ರಿಯ ದೈವ ಮಂಡಳಿ ಅಧ್ಯಕ್ಷ ರವಿಕುಮಾರ್ ಅಚ್ಚು ಕಟ್ಟಾಗಿ ನಿರ್ವಹಿಸಿದರು.