ಚಾಮುಂಡಿ ಅಲಂಕಾರದಲ್ಲಿ ಕಂಗೊಳಿಸಿದ ಜಗನ್ಮಾತೆ
ಹರಿಹರಪುರ ಮಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ ಶರನ್ನವರಾತ್ರಿ ಅಂಗವಾಗಿ ದಿನಾಂಕ ಅ.18 ಭಾನುವಾರದಂದು ಆಶ್ವಯುಜ ಶುಕ್ಲ ಅಷ್ಟಮಿ (ದುರ್ಗಾಷ್ಟಮಿ) ಪ್ರಯುಕ್ತ ಧಾರ್ಮಿಕ ಕೈಂಕರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವ ಮತ್ತು ಭಕ್ತಿಭಾವದಿಂದ ಸಂಪನ್ನಗೊಂಡವು.
ದುರ್ಗಾಷ್ಟಮಿ ಪೂಜೆ ಹಾಗೂ ಸಿಂಹಾರೋಹಣ (ಚಾಮುಂಡಾ) ಅಲಂಕಾರ:ದುರ್ಗಾಷ್ಟಮಿ ಪುಣ್ಯದಿನದಂದು ಬೆಳಿಗ್ಗೆಯಿಂದಲೇ ಶ್ರೀಮಠದಲ್ಲಿ ದುರ್ಗಾಷ್ಟಮಿ ವಿಶೇಷ ಪೂಜಾ ವಿಧಿವಿಧಾನಗಳು ಆರಂಭ ಗೊಂಡವು. ಶ್ರೀ ಶಾರದಾ ಪರಮೇಶ್ವರಿಗೆ ‘ಸಿಂಹಾರೋಹಣ’ (ಚಾಮುಂಡಾ ದೇವಿ) ರೂಪದಲ್ಲಿ ಅತ್ಯಂತ ನಯನ ಮನೋಹರವಾಗಿ ವಿಶೇಷ ಅಲಂಕಾರ ನೆರವೇರಿಸಲಾಗಿತ್ತು. ಸಿಂಹವಾಹಿನಿಯಾಗಿ ಕಂಗೊಳಿಸಿದ ಜಗನ್ಮಾತೆಯನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು.
ಗಾನಸುಧೆ: ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಖ್ಯಾತ ವಿದುಷಿ ಲಾವಣ್ಯ ಕೃಷ್ಣಮೂರ್ತಿ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ದೇವಿ ಸ್ತುತಿಗಳು ಹಾಗೂ ನವರಾತ್ರಿಯ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ ನೆರೆದಿದ್ದ ಸಂಗೀತಾಸಕ್ತರನ್ನು ಭಕ್ತಿಭಾವದ ರಸದೌತಣದಲ್ಲಿ ತೇಲಿಸಿದರು.
ರಾತ್ರಿ ಪರಮಪೂಜ್ಯ ಮಹಾಸ್ವಾಮಿಗಳ ಅಮೃತಹಸ್ತದಿಂದ ಧಾರ್ಮಿಕ ಮಹತ್ವವುಳ್ಳ ‘ಶ್ರೀಚಕ್ರ ಪೂಜೆ’ ಶಾಸ್ತ್ರೋಕ್ತವಾಗಿ ಜರುಗಿತು. ತದನಂತರ ಸಾಂಪ್ರದಾಯಿಕ ವೈಭವದ ಶ್ರೀಗಳವರ ದರ್ಬಾರ್ ಮತ್ತು ಅಷ್ಟಾವಧಾನ ಸೇವೆಗಳು ನೆರವೇರಿದವು. ಈ ಸಂದರ್ಭದಲ್ಲಿ ಶ್ರೀಗಳವರು ನೆರೆದಿದ್ದ ಭಕ್ತಕೋಟಿಗೆ ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು.