ಕನ್ನಡಪ್ರಭ ವಾರ್ತೆ ಮಂಡ್ಯ
ಹುತಾತ್ಮ ವೀರ ಮಕ್ಕಳ ಆತ್ಮಕ್ಕೆ ಶಾಂತಿ ಕೋರುವ ಧ್ಯೋತಕವಾಗಿ ನಡೆಯುವ ಶ್ರೀ ಭೂಮಿ ಸಿದ್ಧೇಶ್ವರ ಸ್ವಾಮಿ ಅಟ್ಟುಣ್ಣುವ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.ತಾಲೂಕಿನ ಸಂತೆಕಸಲಗೆರೆ ಗ್ರಾಮದ ಹೊರವಲಯದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಭೂಮಿಸಿದ್ಧೇಶ್ವರಸ್ವಾಮಿ ದೇವರ ದರ್ಶನ ಪಡೆದ ಸಾವಿರಾರು ಭಕ್ತರು ಅಟ್ಟುಣ್ಣುವ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಿದರು. ಅಟ್ಟುಣ್ಣುವ ಜಾತ್ರೆ ಪ್ರಯುಕ್ತ ಮಂಗಳವಾರ ಬೆಳಗ್ಗೆಯೇ ದೇವರಿಗೆ ಹೋಮ, ಹವನ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಪೂಜಾ ವಿಧಿ- ವಿಧಾನಗಳನ್ನು ಅನುಸರಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಸಂತೆಕಸಲಗೆರೆ, ಹನಿಯಂಬಾಡಿ, ಕಾರಸವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಮಂಗಲ, ಬೇವಿನಹಳ್ಳಿ, ಹುಲ್ಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಈ ಜಾತ್ರೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯ ಶ್ರೀ ಭೂಮಿಸಿದ್ಧೇಶ್ವರ ಸ್ವಾಮಿಯ ಒಕ್ಕಲಿನವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಯುಗಾದಿ ಹಬ್ಬದ ನಂತರ ನಡೆಯುವ ಈ ಜಾತ್ರೆಯಲ್ಲಿ ೩೦ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಸೋಮವಾರ ಸಂಜೆಯೇ ಬಾಯಿ ಬೀಗ ಆಚರಣೆ ನಡೆಯಿತು. ಮಂಗಳವಾರ ಬೆಳಗ್ಗೆಯಿಂದ ದೇವಾಲಯ ಆವರಣದಲ್ಲಿ ಸಾವಿರಾರು ಜನರು ಸೇರಿ ದೇವರ ದರ್ಶನ ಪಡೆದರು. ಬಳಿಕ ಭಕ್ತರು ಪಾನಕ, ಮಜ್ಜಿಗೆ ಹಾಗೂ ರಸಾಯನ ವಿತರಣೆ ಮಾಡಿ ಸಂಭ್ರಮಿಸಿದರು.ಜಾತ್ರೆಗೆ ಬಂದ ಮಹಿಳೆಯರು ಅಡುಗೆ ಸಾಮಗ್ರಿಗಳನ್ನು ಬುಟ್ಟಿಯಲ್ಲಿ ತಂದು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಹೊರ ಆವರಣಕ್ಕೆ ತೆರಳಿ ಅಡುಗೆ ಮಾಡಿದರು. ಸಸ್ಯಹಾರದ ಜೊತೆಗೆ ಮಾಂಸಹಾರವನ್ನೂ ತಯಾರಿಸಿ ಬಂಧು- ಮಿತ್ರರು, ನೆಂಟರು, ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸಿದರು.
ಈ ಜಾತ್ರೆಯಲ್ಲಿ ಮಾಂಸಾಹಾರವನ್ನು ದೇವರಿಗೆ ಅರ್ಪಿಸುವುದಿಲ್ಲ. ದೇವಾಲಯದ ಹೊರ ಆವರಣದಲ್ಲಿ ಮಾಂಸಾಹಾರ ತಯಾರಿಸಲಾಗುತ್ತದೆ. ದೇವರಿಗೆ ಪೂಜೆ ಸಲ್ಲಿಸಿ ತಂದ ತೀರ್ಥವನ್ನು ಪ್ರೋಕ್ಷಣೆ ಮಾಡಿ ಊಟ ಬಡಿಸುವ ಮೂಲಕ ಸಂಪ್ರದಾಯ ಆಚರಣೆ ಮಾಡಿದರು. ಜಾತ್ರೆಗೆ ಬಂದ ಸಹಸ್ರಾರು ಸಂಖ್ಯೆಯ ಜನರು ಮಾಂಸಾಹಾರ ಸೇವಿಸಿದರು. ಊಟ ಮಾಡಿದ ನಂತರ ಎಲೆಗಳನ್ನು ತೆರವುಗೊಳಿಸದೆ ಉಂಡ ಸ್ಥಳದಲ್ಲಿಯೇ ಬಿಡುವುದು ಆಚರಣೆಯಾಗಿದೆ. ರಾತ್ರಿ ಸುಮಾರು ೮ ಗಂಟೆಯ ವೇಳೆಗೆ ಜಾತ್ರೆ ಸಂಪನ್ನಗೊಂಡಿತು.ಈ ಜಾತ್ರೆಯ ವಿಶೇಷವೆಂದರೆ ಜಾತ್ರೆ ಮುಗಿದ ಬಳಿಕ ರಾತ್ರಿ ವೇಳೆ ದೇವರ ಸನ್ನಿಧಿ ಅಂಗಳದಲ್ಲಿ ಯಾರೊಬ್ಬರೂ ಸುಳಿಯುವುದಿಲ್ಲ. ಬೆಳಗ್ಗೆ ವೇಳೆಗೆ ಜನರು ಉಂಡ ಎಲೆಗಳು ಒಂದೆಡೆ ಸೇರಿರುತ್ತವೆ ಎಂಬ ಪ್ರತೀತಿ ಇದೆ. ಪ್ರತಿ ಗುರುವಾರ ಮತ್ತು ಭಾನುವಾರ ದೇವರಿಗೆ ವಿಶೇಷ ಪೂಜೆ ಇರುತ್ತದೆ. ಮಕ್ಕಳಿಲ್ಲದವರು, ಮದುವೆಯಾಗದವರು ದೇವರಿಗೆ ಸೇವೆ ಮಾಡುವ ಮೂಲಕ ದೇವರಿಗೆ ಹರಕೆ ತೀರಿಸುವರು.
ಶ್ರೀ ಭೂಮಿ ಸಿದ್ಧೇಶ್ವರಸ್ವಾಮಿ ಟ್ರಸ್ಟ್ ಅಧ್ಯಕ್ಷ ಕೊತ್ತತ್ತಿ ತಮ್ಮಣ್ಣ, ಟ್ರಸ್ಟ್‌ನ ಕಾರ್ಯದರ್ಶಿ ಬೋರೇಗೌಡ, ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಮಾಜಿ ಕಾರ್ಯದರ್ಶಿ ತಿಮ್ಮೇಗೌಡ, ಟ್ರಸ್ಟಿಗಳಾದ ಬಸವರಾಜು, ಚೇತನ್‌ಕುಮಾರ್, ಶಿವರಾಜು, ಕೆಂಪೇಗೌಡ, ಮಾಜಿ ಕಾರ್ಯದರ್ಶಿ ಕೆ.ಸಿ.ಶ್ರೀನಿವಾಸ್, ಸಂತೆಕಸಲಗೆರೆ ಗ್ರಾಪಂ ಮಾಜಿ ಅಧ್ಯಕ್ಷ ರುದ್ರಪ್ಪ ಅವರು ಸ್ಥಳದಲ್ಲಿ ಹಾಜರಿದ್ದರು. ಜಾತ್ರೆಯ ವ್ಯವಸ್ಥೆಗಳು ಸುಗಮವಾಗಿ ನಡೆಯುವುದಕ್ಕೆ ನೆರವಾಗಿದ್ದರು.ಸಂಚಾರ ಅಸ್ತವ್ಯಸ್ತ:
ಸಂತೆಕಸಲಗೆರೆ ಗ್ರಾಮದ ಹೊರವಲಯದ ಶ್ರೀ ಭೂಮಿಸಿದ್ಧೇಶ್ವರ ಸ್ವಾಮಿ ಸನ್ನಿಧಿಗೆ ಸುತ್ತಮುತ್ತಲ ಊರುಗಳಿಂದ ಎತ್ತಿನಗಾಡಿ, ಟ್ರ್ಯಾಕ್ಟರ್, ಆಟೋ, ಮಿನಿ ಟೆಂಪೋ, ಕಾರುಗಳ ಮೂಲಕ ಸಾವಿರಾರು ಜನರು ಬರುತ್ತಿದ್ದರಿಂದ ಎಲ್ಲಾ ಕಡೆಯ ರಸ್ತೆಗಳಲ್ಲೂ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೂರಾರು ಬೈಕ್‌ಗಳಲ್ಲಿ ಜನರು ಆಗಮಿಸಿದ್ದರು. ಪೊಲೀಸರು ಮತ್ತು ಗೃಹರಕ್ಷಕ ದಳದವರು ಜನರನ್ನು ನಿಯಂತ್ರಿಸುವುದರೊಂದಿಗೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹರಸಾಹಸ ನಡೆಸಿದ್ದರು.