ಐದು ದಿನದ ಗಣಪತಿಗೆ ಅದ್ಧೂರಿ ವಿದಾಯ

KannadaprabhaNewsNetwork |  
Published : Sep 01, 2025, 01:04 AM IST
31ಎಚ್‌ಯುಬಿ34ಐದು ದಿನಗಳ ಕಾಲ ಪೂಜೆಗೊಂಡ ಗಣೇಶನನನ್ನು ಭಾನುವಾರ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ನಡೆಸಲಾಯಿತು. | Kannada Prabha

ಸಾರಾಂಶ

ಗಣೇಶ ವಿಸರ್ಜನೆ ಸಲುವಾಗಿ ಮಹಾನಗರ ಪಾಲಿಕೆಯು ಬಹುತೇಕ ವಾರ್ಡ್‌ಗಳಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಿತ್ತು. ಟ್ರ್ಯಾಕ್ಟರ್ ನೀರಿನ ಟ್ಯಾಂಕರ್‌ಗಳಲ್ಲಿ ಇರಿಸಿ ಅದರಲ್ಲಿ ಗಣಪತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿತ್ತು.

ಹುಬ್ಬಳ್ಳಿ: ಐದು ದಿನಗಳಿಂದ ಶ್ರದ್ಧೆ, ಭಕ್ತಿ-ಭಾವದಿಂದ ಪೂಜಿಸಿದ ಗಣೇಶನಿಗೆ ಭಾನುವಾರ ಸಡಗರ- ಸಂಭ್ರಮದಿಂದ ವಿದಾಯ ಹೇಳಲಾಯಿತು.

ಕಳೆದ ಬುಧವಾರ ಪ್ರತಿಷ್ಠಾಪಿಸಿದ್ದ ಗಜಾನನನನ್ನು ಬಹುತೇಕ ಕುಟುಂಬಗಳು ಐದು ದಿನಗಳ ವರೆಗೆ ಭಕ್ತಿಯಿಂದ ಪೂಜಿಸಿ ಭಾನುವಾರ ಸಂಜೆ ವಿಶೇಷ ಪೂಜೆ, ನೈವೇದ್ಯ ಸಮರ್ಪಿಸಿದರು. ಬಳಿಕ ಮನೆ ಮಂದಿಯೆಲ್ಲ ಸೇರಿ ಸಮೀಪದ ಕೆರೆ, ಬಾವಿ ಮತ್ತು ತಮ್ಮ ಏರಿಯಾಗಳಲ್ಲಿ ಪಾಲಿಕೆ ತೆರೆದಿದ್ದ ವಿಸರ್ಜನಾ ಟ್ಯಾಂಕ್‌ಗಳಲ್ಲಿ ವಿಸರ್ಜಿಸಿದರು. ಕೆಲವರು ಆಟೋ, ಕಾರು ಮತ್ತು ಬೈಕ್‌ಗಳಲ್ಲಿ ತೆರಳಿ ವಿಸರ್ಜಿಸಿದರು. ವಿಸರ್ಜನೆ ವೇಳೆ ಘೋಷಣೆಗಳು ಮೊಳಗಿದವು. ಮಕ್ಕಳು, ಗೆಳೆಯರು, ಕುಟುಂಬಸ್ಥರು ರಸ್ತೆ ಉದ್ದಕ್ಕೂ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಕೆಲವು ಜನರು ಅಷ್ಟಮಿ ಮುಹೂರ್ತ ಕಾರಣದಿಂದ ಏಳನೇ ದಿನ ವಿಸರ್ಜಿಸುವ ನಿರ್ಧಾರ ಕೈಗೊಂಡಿದ್ದಾರೆ.

ವಾಹನ ವ್ಯವಸ್ಥೆ: ಗಣೇಶ ವಿಸರ್ಜನೆ ಸಲುವಾಗಿ ಮಹಾನಗರ ಪಾಲಿಕೆಯು ಬಹುತೇಕ ವಾರ್ಡ್‌ಗಳಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಿತ್ತು. ಟ್ರ್ಯಾಕ್ಟರ್ ನೀರಿನ ಟ್ಯಾಂಕರ್‌ಗಳಲ್ಲಿ ಇರಿಸಿ ಅದರಲ್ಲಿ ಗಣಪತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ವಲಯಗಳಲ್ಲಿ ಅಗತ್ಯಗಳಿಗೆ ಅನುಗುಣವಾಗಿ ಟ್ರ್ಯಾಕ್ಟರ್‌ಗಳನ್ನು ಪೂರೈಸಲಾಗಿತ್ತು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದರು.

165ಕ್ಕೂ ಅಧಿಕ ಸಾರ್ಜಜನಿಕ ಗಣೇಶ ಮೂರ್ತಿಗಳನ್ನು ಯುವಕ ಮಂಡಳದ ಸದಸ್ಯರು ಡಿಜೆ ಮತ್ತು ಸ್ಪೀಕರ್‌ಗಳ ಸದ್ದಿನಲ್ಲಿ ಕುಣಿಯುತ್ತ ಮೆರವಣಿಗೆಯಲ್ಲಿ ಸಾಗಿ ವಿಸರ್ಜಿಸಿದರು. ಪೊಲೀಸರು ಮೆರವಣಿಗೆ ವೇಳೆ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚರಿಕೆ ವಹಿಸಿದ್ದರು.

ಕೆಲವರು ಮನೆ ಆವರಣದಲ್ಲೇ ಗಣೇಶ ವಿಸರ್ಜನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಬಕೆಟ್ ಹಾಗೂ ಕಂಟೇನರ್‌ಗಳಲ್ಲಿ ವಿಸರ್ಜಿಸಿದರು. ಗ್ಲಾಸ್‌ಹೌಸ್ ಆವರಣದ ಬಾವಿಯನ್ನು ಗಣೇಶ ವಿಸರ್ಜನೆಗೆ ಸಜ್ಜುಗೊಳಿಸಲಾಗಿದ್ದು ಸುತ್ತಮುತ್ತಲಿನ ಪ್ರದೇಶದ ಮನೆಗಳಲ್ಲಿನ ಮತ್ತು ಸಾರ್ವಜನಿಕ ಗಣಪತಿಗಳನ್ನು ಇಲ್ಲಿ ವಿಸರ್ಜಿಸಲಾಯಿತು.

PREV

Recommended Stories

ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ
ಒತ್ತಡ ಹೇರಿ ಶಾಸಕರಿಂದ ರಸ್ತೆ ಅಗಲೀಕರಣ