ಹುಬ್ಬಳ್ಳಿ: ಮಹಾನಗರದಲ್ಲಿ ಏಳು ದಿನಗಳ ಕಾಲ ಶ್ರದ್ಧೆ, ಭಕ್ತಿ-ಭಾವದಿಂದ ಪೂಜಿತಗೊಂಡ ಗಜಮುಖನಿಗೆ ಮಂಗಳವಾರ ಅದ್ಧೂರಿಯಾಗಿ ವಿದಾಯ ಹೇಳಲಾಯಿತು.
ಆ. 27ರಂದು ಮನೆ- ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳಿಗೆ ಭಕ್ತಿಯಿಂದ ಪೂಜೆ ನೆರವೇರಿಸಿ, ಆರತಿ ಬೆಳಗಿ, ನೈವೇದ್ಯ ಅರ್ಪಿಸಲಾಯಿತು. ಬಳಿಕ ಮನೆ ಮಂದಿಯೆಲ್ಲ ಸೇರಿಕೊಂಡು ಸಮೀಪದ ಕೆರೆ, ಬಾವಿವರೆಗೆ ಮೆರವಣಿಗೆ ಮೂಲಕ ತಂದು ವಿಸರ್ಜಿಸಿದರು.ಇನ್ನು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಯುವಕ ಮಂಡಳದ ಸದಸ್ಯರು ಡಿಜೆಗಳ ಅಬ್ಬರದಲ್ಲಿ ಮೆರವಣಿಗೆ ಮಾಡಿ ವಿಸರ್ಜಿಸಿದರು. ಈ ವೇಳೆ ಯುವಕ-ಯುವತಿಯರೆನ್ನೆದೆ ಕುಣಿದು ಕುಪ್ಪಳಿಸಿದರು.
ಇಲ್ಲಿನ ಉಣಕಲ್ಲಿನ ಉಣಕಲ್ ಸಾಮ್ರಾಟ್ ವಿಸರ್ಜನಾ ಮೆರಮಣಿಗೆಯಲ್ಲಿ ಸಾವಿರಾರು ಜನ ನೆರೆದಿದ್ದರು. ಯುವಕರು ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದರು. ಶ್ರೀನಗರ, ಈಜುಗೊಳ ಸೇರಿ ವಿವಿಧೆಡೆಯ ಮೂರ್ತಿಗಳನ್ನು ವಿಸರ್ಜಿಸಲಾಯಿತು.ನಗರದ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದ ಸುಮಾರು 65ಕ್ಕೂ ಅಧಿಕ ಮೂರ್ತಿಗಳನ್ನು ಮಂಗಳವಾರ ವಿಸರ್ಜಿಸಲಾಯಿತು.
ಮುಸ್ಲಿಮರಿಂದ ಗಣೇಶ ಮೂರ್ತಿಗೆ ಮಾಲಾರ್ಪಣೆ: ನಗರದಲ್ಲಿ ಏಳನೆಯ ದಿನದ ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಸಮುದಾಯದವರು ಗಣೇಶನ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.ಇಲ್ಲಿನ ಕೇಶ್ವಾಪುರದ ಶಬರಿನಗರದಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ಕಾಲಕ್ಕೆ ಮುಸ್ಲಿಮ್ ಸಮುದಾಯದ ಮುಖಂಡರು, ಯುವಕರು ಆಗಮಿಸಿ ಮಾಲಾರ್ಪಣೆ ಮಾಡಿದರು. ಜತೆಗೆ ಮೆರವಣಿಗೆಯಲ್ಲಿ ಹಿಂದೂಗಳೊಂದಿಗೆ ಹೆಜ್ಜೆ ಹಾಕಿದರು. ಈ ಮೂಲಕ ಸೌಹಾರ್ದತೆ ಮೆರೆದರು.
ಕವಾಲಿ ಹಾಡು: ಅತ್ತ ಕೇಶ್ವಾಪುರದಲ್ಲಿ ಮುಸ್ಲಿಂ ಸಮುದಾಯದವರು ಗಣೇಶನಿಗೆ ಮಾಲಾರ್ಪಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದರೆ, ಇತ್ತ ಸಿಬಿಟಿ ಹತ್ತಿರದ ಶಹಾಬಜಾರ್ ಬಳಿ ಮಸೀದಿ ಬಳಿ ಗಣೇಶನ ವಿಸರ್ಜನೆ ಮೆರವಣಿಗೆ ಬಂದಾಗ ಗಣೇಶ ಮಂಡಳಿ ಅವರು ಕವಾಲಿ ಹಾಡು ಧ್ವನಿವರ್ಧಕದಲ್ಲಿ ಹಾಕುವ ಮೂಲಕ ಭಾವೈಕ್ಯತೆ ಮೆರದರು. ಈ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಏಳನೆಯ ದಿನದ ಗಣೇಶನ ವಿಸರ್ಜನಾ ಮೆರವಣಿಗೆ ಸಾಕ್ಷಿಯಾಯಿತು.