ಬಸವಲಿಂಗಯ್ಯ ಹಿರೇಮಠ ಹೆಸರಿನಲ್ಲಿ ಪ್ರತಿಷ್ಟಾನ ಆಗಲಿ

KannadaprabhaNewsNetwork |  
Published : Sep 03, 2025, 01:01 AM IST
2ಡಿಡಬ್ಲೂಡಿ2ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ತತ್ವಪದಕಾರ ರಾಮಪ್ಪ ಹಂಚಿನಮನಿ ಅವರಿಗೆ ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ದಕ್ಷಿಣ ಕನ್ನಡದ ಯಕ್ಷಗಾನವನ್ನು ಡಾ. ಶಿವರಾಮ ಕಾರಂತರು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದಂತೆ ಉತ್ತರ ಕರ್ನಾಟಕದ ಜಾನಪದ ಕಲೆಗಳನ್ನು ಹಾಗೂ ಕೃಷ್ಣ ಪಾರಿಜಾತ ಬಯಲಾಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಬಸವಲಿಂಗಯ್ಯ ಶ್ರಮಿಸಿದರು.

ಧಾರವಾಡ: ಜಾನಪದ ಕಲೆ, ಸಾಹಿತ್ಯ ಉಳಿಸುವ ದಿಸೆಯಲ್ಲಿ ಕೆಲಸ ಮಾಡಿದ, ನಾಡಿನ ಕಂಚಿನ ಕಂಠದ ಗಾಯಕರು ಬಸವಲಿಂಗಯ್ಯ ಹಿರೇಮಠ. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರತಿಷ್ಠಾನ ಮಾಡಿ ಈ ಮೂಲಕ ಜನಪದ ಉಳಿಸುವ ಕಾರ್ಯ ಮಾಡಬೇಕಿದೆ ಎಂದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಹೇಳಿದರು.

ಇಲ್ಲಿಯ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಾನಪದ ಸಂಶೋಧನಾ ಕೇಂದ್ರದಿಂದ ನಡೆದ ಗುರಮ್ಮ ಹಾಗೂ ವೀರಪ್ಪ ಚಿನಗುಡಿ ದತ್ತಿಯಲ್ಲಿ ನಡೆದ ಬಸವಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ಪ್ರದಾನದಲ್ಲಿ ಅವರು ಮಾತನಾಡಿ, ದಕ್ಷಿಣ ಕನ್ನಡದ ಯಕ್ಷಗಾನವನ್ನು ಡಾ. ಶಿವರಾಮ ಕಾರಂತರು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದಂತೆ ಉತ್ತರ ಕರ್ನಾಟಕದ ಜಾನಪದ ಕಲೆಗಳನ್ನು ಹಾಗೂ ಕೃಷ್ಣ ಪಾರಿಜಾತ ಬಯಲಾಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಬಸವಲಿಂಗಯ್ಯ ಶ್ರಮಿಸಿದರು. ಸಂಗೊಳ್ಳಿ ರಾಯಣ್ಣನಿಗೆ ಹಾಡಿನ ಮೂಲಕ ಮರುಜನ್ಮ ನೀಡಿ ರಾಯಣ್ಣನ ಕಿಚ್ಚು ಹೋರಾಟ ಎಲ್ಲವನ್ನು ಅರ್ಥ ಮಾಡಿಕೊಳ್ಳಲು ಅವರ ಕಂಠದಿಂದ ಬಂದ ಹುಲಿಯು ಹುಟ್ಟಿತು ಕಿತ್ತೂರ ನಾಡಾಗ... ಹಾಡಿನಿಂದ ಸಾಧ್ಯವಾಯಿತು ಎಂದರು.

ಜೊತೆಗೆ ಶ್ರೀಕೃಷ್ಣ ಪಾರಿಜಾತ ಆಟವನ್ನು ಅದರ ಮೂಲಕ್ಕೆ ಧಕ್ಕೆಯಾಗದಂತೆ ಎರಡುವರೆ ಗಂಟೆಗೆ ಪರಿಷ್ಕರಿಸಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿದ್ದು ಹೆಗ್ಗಳಿಕೆ. ಅಗಾಧವಾದ ಜಾನಪದ ಕಣಜ ಬಸವಲಿಂಗಯ್ಯಾ ಹಿರೇಮಠ ಎಂದರು.

ತತ್ವಪದಕಾರ ರಾಮಪ್ಪ ಹಂಚಿನಮನಿ ಅವರಿಗೆ ಹಿರಿಯ ಲೆಕ್ಕಪರಿಶೋಧಕ ಡಾ. ಎನ್‌.ಎ. ಚರಂತಿಮಠ ಅವರು ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ನಾಟಕಕಾರ ಬಿ.ಆರ್. ಪೊಲೀಸ್‌ಪಾಟೀಲ ಅಭಿನಂದನಾ ಪರ ನುಡಿಯಲ್ಲಿ ಲಾವಣಿಗಳನ್ನು ಹೇಳಿದರು.

ಡಾ. ಜ್ಯೋತಿರ್ಲಿಂಗ ಹೊನಕಟ್ಟಿ, ನೀಲಕಂಠ ಸ್ವಾಮೀಜಿ, ಪ್ರೊ.ಎನ್.ಎಸ್. ಗಲಗಲಿ ಅಧ್ಯಕ್ಷತೆ ವಹಿಸಿದ್ದರು. ಗಜಾನನ ಚಿನಗುಡಿ, ಬೈಲೂರಿನ ನಂದಿಹಳ್ಳಿ, ಸಂಗಮೇಶ ಹಿರೇಮಠ ಇದ್ದರು. ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಗುರು ಕಲ್ಮಠ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಬಾಳಪ್ಪ ಚಿನಗುಡಿ ನಿರೂಪಿಸಿದರು. ನಾಗಭೂಷಣ ಹಿರೇಮಠ ವಂದಿಸಿದರು. ಆರಂಭದಲ್ಲಿ ಜಾನಪದ ಕಲಾ ಬಳಗ, ಸಿಂಗಾರ ಸಖಿ ಬಳಗದಿಂದ ಹಾಗೂ ಬೈಲೂರಿನ ಭಜನಾ ಮಂಡಳಿಯವರು ತತ್ವಪದಗಳನ್ನು ಪ್ರಸ್ತುತಪಡಿಸಿದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ