ಧಾರವಾಡ: ನಿರಂತರ ಮಳೆಯಿಂದಾಗಿ ರೈತರು ತೊಂದರೆಯಲ್ಲಿದ್ದು, ರಾಜ್ಯ ಸರ್ಕಾರ ಸ್ಪಂದಿಸಿ ಕೂಡಲೇ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಧಾರವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಮುಖಂಡರು ಮಂಗಳವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದರು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಇನ್ನೇನು ಬೆಳೆ ಬಂತು ಎನ್ನುವಷ್ಟರಲ್ಲಿ ಮಳೆಯಿಂದಾಗಿ ಹೆಸರು, ಉದ್ದು, ಸೋಯಾ, ಗೋವಿನ ಜೋಳ ಸೇರಿದಂತೆ ಮುಂಗಾರು ಬೆಳೆಗಳು ಹಾಳಾಗಿವೆ. ಅಳಿದುಳಿದ ಬೆಳೆ ತೆಗೆಯಲು ಸಹ ವರುಣ ರೈತರಿಗೆ ಕೃಪೆ ತೋರುತ್ತಿಲ್ಲ. ಈ ಎಲ್ಲ ಸಂಗತಿಯು ಸರ್ಕಾರದ ಗಮನಕ್ಕೆ ಇದ್ದರೂ ಯಾವುದೇ ಸ್ಪಂದನೆ ಇಲ್ಲ. ಇದರಿಂದ ರೈತರು ಜೀವನ ಸಾಗಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಧರಣಿ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಅಮೃತ ದೇಸಾಯಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿ ಆದ ಸಂದರ್ಭದಲ್ಲಿ ರೈತರಿಗೆ ಪರಿಹಾರ ನೀಡಲಾಗಿತ್ತು. ಆದರೆ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸಿದ್ದು ದುರದೃಷ್ಟಕರ. ಸಚಿವರು, ಶಾಸಕರುಗಳು ಬರೀ ಹೊಲಗಳಿಗೆ ವೀಕ್ಷಣೆ ನಡೆಸುವ ಬದಲು ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಬೇಕೆಂದು ಮಂಡಲ ಅಧ್ಯಕ್ಷ ಶಂಕರ ಕೊಮಾರ ದೇಸಾಯಿ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಹಾಕಿದ್ದ ಟೆಂಟ್‌ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ರೈತರು, ಮುಖಂಡರುಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಭಜನೆ ಮೂಲಕ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ರೈತರ ಬೆಂಬಲಕ್ಕೆ ನಿಲ್ಲಿ, ಅವರ ಬದುಕಿಗೆ ಸ್ಫೂರ್ತಿಯಾಗಿ, ಪರಿಹಾರ ಕೊಡಿ, ರೈತರನ್ನು ಉಳಿಸಿ, ಮಳೆಯಿಂದ ಹಾನಿಯಾದ ರಸ್ತೆಗಳನ್ನು ಸರಿಪಡಿಸಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಭಿತ್ತಿ ಫಲಕಗಳನ್ನು ಹಿಡಿದು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಶಂಕರ ಶೇಳಕೆ, ಮುಖಂಡರಾದ ಗಂಗಾಧರ ಪಾಟೀಲ ಕುಲಕರ್ಣಿ, ಶಶಿಮೌಳಿ ಕುಲಕರ್ಣಿ, ನಿಜನಗೌಡ ಪಾಟೀಲ, ನಾಗರಾಜ ಗಾಣಿಗೇರ, ಗುರುನಾಥಗೌಡ ಗೌಡರ, ಮಂಜುನಾಥ ನಡಟ್ಟಿ, ಮಹಾದೇವ ದಂಡಿನ, ಮಹೇಶ ಯಲಿಗಾರ, ಅನಿತಾ ಚಳಗೇರಿ, ಮಹಾವೀರ ದೇಸಾಯಿ, ರಾಜೇಶ್ವರಿ ಅಳಗವಾಡಿ, ಲಕ್ಷೀ ಕಾಶಿಗಾರ, ಈಶ್ವರ ಗಾಣಿಗೇರ, ಲಕ್ಷ್ಮೀ ಶಿಂಧೆ, ಗಂಗಮ್ಮ ನಿರಂಜನ, ಶೃತಿ ಬೆಳ್ಳಕ್ಕಿ, ನಾಗಪ್ಪ ಸೋಗಿ, ಮಂಜುನಾಥ ಹಿರೇಮಠ, ಮೃತ್ಯುಂಜಯ ಹಿರೇಮಠ ಮತ್ತಿತರರು ಇದ್ದಾರೆ.