ಸಿಂಧೋಳ ಸಮಾಜದಿಂದ ಚಾಟಿ ಬಡಿದುಕೊಂಡು ಪ್ರತಿಭಟನೆ, ಗಮನಸೆಳೆದ ದುರುಮುರುಗಿ ವೇಷ, ಹಗಲುವೇಷಧಾರಿಗಳುಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿರಾಜ್ಯದಲ್ಲಿನ ೪೯ ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ ಶೇ.೧ರಷ್ಟು ಪಾಲು ನೀಡುವಂತೆ ಒತ್ತಾಯಿಸಿ ರಾಜ್ಯ ಅಸ್ಪೃಶ್ಯ ಅಲೆಮಾರಿಗಳ ಐಕ್ಯ ಸಂಘಟನೆ ಪದಾಧಿಕಾರಿಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸುಪ್ರೀಂ ಕೋರ್ಟ್ ತೀರ್ಮಾನದಂತೆ ಅಲೆಮಾರಿ ಸಮುದಾಯಗಳಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಹಿನ್ನೆಲೆ ವಿಶೇಷವಾಗಿ ಶೇ.೧ರಷ್ಟು ಪ್ರತ್ಯೇಕ ಮೀಸಲಾತಿ ಕಡ್ಡಾಯಗೊಳಿಸಬೇಕು. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಅನ್ವಯ ಅಲೆಮಾರಿ ಸಮುದಾಯಗಳಿಗೆ ಶೇ.೧ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು. ರಾಜ್ಯ ಸರ್ಕಾರ ನಿಗದಿಪಡಿಸಿರುವ ಶೇ.೫ರಷ್ಟು ಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕಿಸಿ ಶೇ.೧ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು. ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಸಿಂಧೋಳ ಸಮಾಜದವರು ಚಾಟಿಯಿಂದ ಬಡಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ದುರುಮುರುಗಿಯವರು, ಹಗಲುವೇಷಧಾರಿಗಳು ವಿಶೇಷ ಉಡುಗೆಗಳೊಂದಿಗೆ ಗಮನಸೆಳೆದರು. ಬುಡಗ ಜಂಗಮ ಸಮಾಜಿ ಅಧ್ಯಕ್ಷ ವಿ.ಮಲ್ಲೇಶಪ್ಪ, ಅಲೆಮಾರಿ ಸಮುದಾಯದ ತಾಲೂಕು ಅಧ್ಯಕ್ಷ ಎಸ್.ಬಿ. ಮಂಜುನಾಥ, ಜಿಲ್ಲಾ ಸುಡುಗಾಡು ಸಿದ್ಧರ ಸಂಘದ ಅಧ್ಯಕ್ಷ ಕೆ.ಚೌಡಪ್ಪ, ಪ್ರಧಾನ ಕಾರ್ಯದರ್ಶಿ ಆನೇಗಟ್ಟೊ ಕರಿಬಸವರಾಜ, ಗ್ರಾಪಂ ಸದಸ್ಯರಾದ ಪತ್ರಿ ಯಲ್ಲಪ್ಪ, ಗಾಳೆಪ್ಪ, ಸಿಂಧೋಳ ಸಮಾಜದ ನರಸಿಂಗ, ಹಂದಿಜೋಗಿ ಸಮಾಜದ ಬೋಜರಾಜ, ಆನಂದ, ಚನ್ನದಾಸ ಸಮಾಜದ ಪ್ರಹ್ಲಾದ್, ದಲಿತ ಸಂಘಟನೆಯ ಎಚ್.ದೊಡ್ಡಬಸಪ್ಪ, ಹಂಪಾಪಟ್ಟಣ ಸಿದ್ದರ ನಾಗರಾಜ, ಎಸ್.ಕೆ. ಮಹೇಶ, ವಿ.ಸಣ್ಣಅಜ್ಜಯ್ಯ, ಕೆ.ಲಕ್ಷ್ಮಣ, ಬೆಲ್ಲದ ಬಸವರಾಜ, ಎ.ರವಿ, ಎಸ್.ಕೆ. ಶೇಖರಪ್ಪ ಕಿನ್ನೂರಿ, ಕೆ.ಬಸವರಾಜ, ಕೆ.ವೀರೇಶ, ದುರುಗಪ್ಪ, ಮರಿಯಪ್ಪ ಇತರರಿದ್ದರು.