- - ವಿವಿಧ ರೀತಿಯ ವೇಷಭೂಷಣ ತೊಟ್ಟು ಗಮನ ಸೆಳೆದ ಮಕ್ಕಳುಕನ್ನಡಪ್ರಭ ವಾರ್ತೆ ಕೊಪ್ಪ
ಅಯೋಧ್ಯಾ ರಾಮ ಮಂದಿರ ಪ್ರತಿಷ್ಠಾಪನಾ ೩ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಅಖಂಡ ದೀಪೋತ್ಸವ ಮತ್ತು ಬೃಹತ್ ಹಿಂದೂ ಸಮಾಜೋತ್ಸವ ಕೊಪ್ಪದ ಇತಿಹಾಸದಲ್ಲೇ ದಾಖಲೆ ಬರೆಯಿತು.
ಬೆಳಿಗ್ಗೆ ಮೇಲಿನಪೇಟೆ ಶ್ರೀ ರಾಮ ಮಂದಿರದಲ್ಲಿ ಪೂಜೆ ನೆರವೇರಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ ನಂತರ ಸಂಜೆ ಕೊಪ್ಪದ ವಿವಿಧೆಡೆಯಿಂದ ಹೊರಟ ಶೋಭಾ ಯಾತ್ರೆಯಲ್ಲಿ ಮಕ್ಕಳು ವಿವಿಧ ರೀತಿ ವೇಷಭೂಷಣ ತೊಟ್ಟು ಗಮನ ಸೆಳೆದರು.ರಸ್ತೆಯ ಇಕ್ಕೆಲಗಳಲ್ಲಿ ದೀಪ ಹಚ್ಚಿದ ಹಿಂದೂ ಬಾಂಧವರು ಅಖಂಡ ದೀಪೋತ್ಸವ, ವಿವಿಧ ಸ್ತಬ್ಧ ಚಿತ್ರಗಳ ವಾಹನಗಳ ಮೆರವಣಿಗೆಗಳು ಶ್ರೀ ವೀರಭದ್ರ ದೇವಸ್ಥಾನ ದಲ್ಲಿ ಮೆರವಣಿಗೆ ಸಂಗಮಗೊಂಡು ಪೂಜೆ ನೆರವೇರಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ದಿವಾಕರ್ ಭಟ್ ಸಾಂಬಾಜಿಯಾಗಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಕಾಶ್.ಸಿ.ಎಚ್ ಅವರು ಛತ್ರಪತಿ ಶಿವಾಜಿಯಾಗಿ ಕಾಣಿಸಿಕೊಂಡು ಗಮನ ಸೆಳೆದರು.
ಕ್ಲಾಸಿಕ್ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಸಮಾಜೋತ್ಸವಕ್ಕೆ ಶಕಟಪುರ ಪೀಠಾಧೀಶ ಜಗದ್ಗುರು ಕೃಷ್ಣಾನಂದತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಹಿಂದೂ ಸಮಾಜ ಉಳಿಯಲು ಸನಾತನ ಧರ್ಮ ಮತ್ತು ಸಂಸ್ಕೃತಿ ನಿರಂತರವಾಗಿ ತಮ್ಮ ಕಾರ್ಯನಿರ್ವಹಿಸಬೇಕು. ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೂಗಳು ಸೇರಿ ಈ ಸಮಾಜೋತ್ಸವ ಆಯೋಜನೆ ಮಾಡಿರುವುದು ಬಹಳ ಸಂತೋಷ ತಂದಿದೆ. ಪ್ರತಿ ವರ್ಷ ಇದೇ ರೀತಿ ಒಟ್ಟಾಗಿ ಹಿಂದೂ ಸಮಾಜೋತ್ಸವ ಆಚರಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ರಾಜ್ಯ ಸಂಯೋಜಕ ಮನೋಹರ್ ಮಠದ್ ದಿಕ್ಸೂಚಿ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಎಲ್.ಎಮ್.ಪ್ರಕಾಶ್ ಕೌರಿ ವಹಿಸಿದ್ದರು. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಉಪಾಧ್ಯಕ್ಷ ಡಾ. ಉದಯಶಂಕರ್, ಬಿ.ಕೆ.ಗಣೇಶ್ ರಾವ್ ಸೇರಿದಂತೆ ಎಲ್ಲಾ ಪ್ರಮುಖ ಹಿಂದೂ ಮುಖಂಡರು ಮತ್ತು ಸಮಸ್ತ ಹಿಂದೂ ಬಾಂಧವರು ಉಪಸ್ಥಿತರಿದ್ದರು.