ಅದ್ಧೂರಿಯಾಗಿ ಜರುಗಿದ ಹಿಂದು ಮಹಾಗಣಪತಿ ಶೋಭಾಯಾತ್ರೆ

KannadaprabhaNewsNetwork | Published : Oct 17, 2023 12:45 AM

ಸಾರಾಂಶ

ನಗರದ ಕಾಗಿನೆಲೆ ಕ್ರಾಸ್ ಬಳಿ ವಿಶ್ವ ಹಿಂದು ಪರಿಷತ್ ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಸೋಮವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ನಗರದ ಕಾಗಿನೆಲೆ ಕ್ರಾಸ್ ಬಳಿ ವಿಶ್ವ ಹಿಂದು ಪರಿಷತ್ ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಸೋಮವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.

ಹಿಂದು ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆ ನಗರದ ಹೊಸಮನಿ ಸಿದ್ದಪ್ಪ ವೃತ್ತ, ಸುಭಾಸ ಸರ್ಕಲ್, ಎಂ.ಜಿ. ರೋಡ್, ಜೆ.ಪಿ. ಸರ್ಕಲ್, ಜೆ.ಎಚ್. ಪಟೇಲ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆ, ಸರ್ಕಲ್‌ಗಳನ್ನು ಕೇಸರಿ ಧ್ವಜ, ಪರಿಪರಿಗಳಿಂದ ಸಿಂಗರಿಸಿದ್ದರಿಂದ ಹಾವೇರಿ ನಗರ ಸಂಪೂರ್ಣ ಕೇಸರಿಮಯವಾಗಿತ್ತು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ, ವಿಶ್ವ ಹಿಂದು ಪರಿಷತ್ ಪ್ರಮುಖ ಎಸ್.ಆರ್. ಹೆಗಡೆ, ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ, ವರುಣ ಆನವಟ್ಟಿ ಸೇರಿದಂತೆ ವಿಶ್ವ ಹಿಂದು ಪರಿಷತ್, ಭಜರಂಗದಳದ ಪದಾಧಿಕಾರಿಗಳು ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಕಾಗಿನೆಲೆ ಕ್ರಾಸ್‌ನಿಂದ ಆರಂಭಗೊಂಡ ಅದ್ಧೂರಿ ಮೆರವಣಿಗೆ ಕಲ್ಲುಮಂಟಪ ರಸ್ತೆ, ಸುಭಾಸ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ಪುರದ ಓಣಿ, ಯಾಲಕ್ಕಿ ಓಣಿ, ಎಂ.ಜಿ. ರೋಡ್, ಪಿ.ಬಿ. ರಸ್ತೆ ಮೂಲಕ ಸಾಗಿತು.

ಮೆರವಣಿಗೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಬೃಹತ್ ಶೋಭಾಯಾತ್ರೆಗೆ ಡಿಜೆ ಸಂಗೀತ ವಿಶೇಷ ಮೆರಗು ನೀಡಿತು. ಯುವಕರು, ಯುವತಿಯರು ಡಿಜೆ ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ ಸಂಭ್ರಮಿಸಿದರು. ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Share this article