ಆಲಮೇಲ: ಪಟ್ಟಣದಲ್ಲಿ ಕಾರಹುಣ್ಣಿಮೆ ಕರಿ ಹರಿಯುವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಉತ್ತಮ ಮುಂಗಾರು ಮಳೆ ಬೆಳೆಗಾಗಿ ರೈತರು ಆಚರಿಸುವ ಮುಂಗಾರು ಪ್ರಾರಂಭದ ರೈತರ ಮೊದಲ ಹಬ್ಬ ಕಾರ ಹುಣ್ಣಿಮೆ. ಕಾರಹುಣ್ಣಿಮೆ ಹಬ್ಬವನ್ನು ಸಾಂಸ್ಕೃತಿಕ ನಗರ ಆಲಮೇಲ ಸೇರಿದಂತೆ ತಾಲ್ಲೂಕಿನಾದ್ಯಂತ ಸಾಂಪ್ರದಾಯಿಕವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಎತ್ತುಗಳ ಬಂಡಿ ಓಡಿಸುವುದರ ಮೂಲಕ ಕರಿ ಹರಿಯುವ ಪದ್ಧತಿ ಶತಮಾನಗಳ ಕಾಲದಿಂದ ನಡೆದು ಬಂದಿದೆ. ಸಂಜೆ ಬಂಡೆಗಳ ಓಟದ ಸ್ಪರ್ಧೆ ನಡೆಯಿತು. ದೇಶಮುಖ ಮತ್ತು ದೇಶಪಾಂಡೆ ಅವರ ಬಂಡಿಗಳು ಬರುವುದಕ್ಕಿಂತ ಮುಂಚೆ ಈ ಬಾರಿ 6 ಚಿಕ್ಕ ಬಂಡಿಗಳ ಸ್ಪರ್ಧೆ ನಡೆಯಿತು. ಇದನ್ನು ನೋಡಲು ಜನಜಂಗುಳಿಯೇ ಸೇರಿತ್ತು. ಪಟ್ಟಣದ ಆರಾಧ್ಯದೈವ ಹಜರತ್ ಪೀರ ಗಾಲೀಬಸಾಹೇಬ ದರ್ಗಾ ಆವರಣದಲ್ಲಿ ಬಂಡಿಗಳನ್ನು ಓಡಿಸುವ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು, ಮಕ್ಕಳು ಸೇರಿದ್ದರು.