ಚನ್ನಪ್ಪನದೊಡ್ಡಿಯಲ್ಲಿ ಅದ್ಧೂರಿ ಸಾಮೂಹಿಕ ಬಾಡೂಟ ಪರಸೆ

KannadaprabhaNewsNetwork | Published : Mar 22, 2025 2:01 AM

ಸಾರಾಂಶ

ಚನ್ನಪ್ಪನದೊಡ್ಡಿ ಗ್ರಾಮದ ಶ್ರೀಏಳೂರಮ್ಮದೇವಿ, ಶ್ರೀಮಾರಮ್ಮ ಶ್ರೀಚೌಡೇಶ್ವರಿ ದೇವರ ಪೂಜಾ ಮಹೋತ್ಸವ ಮತ್ತು ಶ್ರೀಅಂಕನಾಥೇಶ್ವರ ದೇವರ ಪಲ್ಲಕಿ ಉತ್ಸವದ ಅಂಗವಾಗಿ ಎರಡು ದಿನಗಳ ಕಾಲ ಗ್ರಾಮಸ್ಥರು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಚನ್ನಪ್ಪನದೊಡ್ಡಿ ಗ್ರಾಮದಲ್ಲಿ ದೇವರ ಪೂಜಾ ಮಹೋತ್ಸವ ಅಂಗವಾಗಿ ಬಾಡೂಟ ಪರಸೆ ನಡೆಯಿತು.

ಗ್ರಾಮದ ಶ್ರೀಏಳೂರಮ್ಮದೇವಿ, ಶ್ರೀಮಾರಮ್ಮ ಶ್ರೀಚೌಡೇಶ್ವರಿ ದೇವರ ಪೂಜಾ ಮಹೋತ್ಸವ ಮತ್ತು ಶ್ರೀಅಂಕನಾಥೇಶ್ವರ ದೇವರ ಪಲ್ಲಕಿ ಉತ್ಸವದ ಅಂಗವಾಗಿ ಎರಡು ದಿನಗಳ ಕಾಲ ಗ್ರಾಮಸ್ಥರು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಬಾಡೂಟ ಪರಸೆಯಲ್ಲಿ ಅಕ್ಕ ಪಕ್ಕದ ಗ್ರಾಮಸ್ಥರು, ಬಂಧು-ಬಳಗದವರು ನೆರೆಹೊರೆಯವರು ಸೇರಿ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ನಡೆಯುತು.

ಶ್ರೀಏಳೂರಮ್ಮದೇವಿ ಕುಲದ ತೆಂಡೆ ಯಜಮಾನರ ಸಮ್ಮುಖದಲ್ಲಿ ಗ್ರಾಮದ ಬೀದಿ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರದ ನಂತರ ದೇವರ ಪಲ್ಲಕಿ ಉತ್ಸವ, ಪೂಜಾಕುಣಿತ ಮತ್ತು ವೀರಗಾಸೆ ಕುಣಿತವು ತಮಟೆ ನಗಾರಿ ನಾದಮೇಳದೊಂದಿಗೆ ಯಶಸ್ಸಿಯಾಗಿ ನಡೆಯಿತು.

ಮಾ.21ರಂದು ಮುಂಜಾನೆ ೫ಗಂಟೆಗೆ ಮಡೆ, ತಂಬಿಟ್ಟಿನ ಆರತಿಯೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಗ್ರಾಮ ದೇವತೆಗಳಿಗೆ ತಂಪು ತೋರಿ, ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಲಾಯಿತು. ಶ್ರೀಅಂಕನಾಥೇಶ್ವರ ದೇವರ ಪಲ್ಲಕಿ ಉತ್ಸವ ಮುಗಿದ ಬಳಿಕ ನಡೆದ ಬಾಡೂಟದ ಪರಸೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಪ್ರಸಾದ ಸೇವನೆ ಮಾಡಿದರು.

ಮುಖಂಡರಾದ ಮಾ.ನಾಗೇಶ್ ,ಅಂಗಡಿ ಶಿವಣ್ಣ ಅವರು ಮಾತನಾಡಿ, ಗ್ರಾಮದಲ್ಲಿ 3 ವರ್ಷಗಳಿಗೊಮ್ಮ ದೇವರ ನಡೆಯುತ್ತದೆ. ಅಕ್ಕ ಪಕ್ಕದ ಗ್ರಾಮಸ್ಥರು ಉತ್ಸವದಲ್ಲಿ ಭಾಗಿಯಾಗಿ ಸಾಮೂಹಿಕ ಬಾಡೂಟ ಪರಸೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.

ವಿಜೃಂಭಣೆಯಿಂದ ನಡೆದ ಶ್ರೀ ಕಾಳಮ್ಮ ದೇವಿ ಹಬ್ಬ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಳಲು ಗ್ರಾಮದ ಶ್ರೀಕಾಳಮ್ಮ ದೇವಿ ಹಬ್ಬ ಶುಕ್ರವಾರದಂದು ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಶ್ರೀದೊಡ್ಡಮ್ಮತಾಯಿ ದೇವಸ್ಥಾನದ ಆವರಣದಿಂದ ಶ್ರೀಕಾಳಮ್ಮದೇವರಿಗೆ ಹೊಂಬಾಳೆ ಮಾಡಿಕೊಂಡು ಮಹಿಳೆಯರು ಮತ್ತು ಮಕ್ಕಳು ತಂಬಿಟ್ಟಿನ ಆರತಿಯನ್ನು ಬಾಯಿ ಬೀಗದೊಂದಿಗೆ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಗ್ರಾಮದ ಹೊರ ವಲಯದಲ್ಲಿರುವ ಶ್ರೀಕಾಳಮ್ಮ ದೇವಿಯ ಗುಡಿಯವರೆಗೆ ಕಾಲ್ನಡಿಗೆಯಲ್ಲಿ ತೆರಳಿ ದೇವರಿಗೆ ಆರತಿ ಸಲ್ಲಿಸಿ ವಿಶೇಷ ಪೂಜೆ ಮಾಡಿದರು. ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ನಂತರ ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಗ್ರಾಮದ ಮುಖಂಡರಾದ ನಾರಾಯಣ, ಎಚ್.ಡಿ.ರಮೇಶ್, ಸಿದ್ದಯ್ಯ, ಡಿ.ಶಿವಲಿಂಗ, ಕೃಷ್ಣ, ಎಚ್.ಬಿ. ಲಿಂಗಪ್ಪ, ರಾಮಸಿದ್ದಯ್ಯ, ಶಿವ, ಪ್ರದೀಪ್ ಕುಮಾರ್, ಶಿವರಾಮು, ಕರಿಯಪ್ಪ, ದೇವಸ್ಥಾನದ ಅರ್ಚಕರಾದ ಎಚ್.ಸಿ.ಶಂಕರಪ್ಪ, ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು,

Share this article