ಪಂಚ ಗ್ಯಾರಂಟಿ: ಜಿಲ್ಲೆಗೆ ಪ್ರತಿ ಮಾಹೆ ₹80 ಕೋಟಿ

KannadaprabhaNewsNetwork |  
Published : Mar 22, 2025, 02:01 AM IST
ಚಿಕ್ಕಮಗಳೂರಿನ ನ್ಯಾಯಬೆಲೆ ಅಂಗಡಿ ಹಾಗೂ ಸಹಕಾರ ಸಂಘಗಳ ಅಕ್ಕಿ ವಿತರಣಾ ಕೇಂದ್ರಗಳಿಗೆ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಪಡಿತರ ವಿತರಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಪಂಚ ಗ್ಯಾರಂಟಿಯ ಎಲ್ಲಾ ಯೋಜನೆಗಳಿಂದ ಜಿಲ್ಲೆಗೆ ಪ್ರತಿ ತಿಂಗಳು ₹80 ಕೋಟಿ ಗಳನ್ನು ರಾಜ್ಯ ಸರ್ಕಾರ ಜನತೆ ಕಲ್ಯಾಣಕ್ಕಾಗಿ ನೀಡುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

- ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿಗಳಿಗೆ ಗ್ಯಾರಂಟಿ ಪ್ರಾಧಿಕಾರದ ತಂಡ ಭೇಟಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಂಚ ಗ್ಯಾರಂಟಿಯ ಎಲ್ಲಾ ಯೋಜನೆಗಳಿಂದ ಜಿಲ್ಲೆಗೆ ಪ್ರತಿ ತಿಂಗಳು ₹80 ಕೋಟಿ ಗಳನ್ನು ರಾಜ್ಯ ಸರ್ಕಾರ ಜನತೆ ಕಲ್ಯಾಣಕ್ಕಾಗಿ ನೀಡುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ಹಾಗೂ ಸಹಕಾರ ಸಂಘಗಳ ಅಕ್ಕಿ ವಿತರಣಾ ಕೇಂದ್ರಗಳಿಗೆ ತಾಲೂಕು ಅಧ್ಯಕ್ಷ ಮಲ್ಲೇಶ್ ಸ್ವಾಮಿ ಹಾಗೂ ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಭೇಟಿ ನೀಡಿ ಅಕ್ಕಿ ವಿತರಿಸಿ ಮಾತನಾಡಿದರು. ಜಿಲ್ಲೆಯಾದ್ಯಂತ ಇಂದು ಆಯಾ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಅನ್ನಭಾಗ್ಯದ ಅಕ್ಕಿ ವಿತರಣೆ ಆಂದೋಲನದಲ್ಲಿ ಭಾಗವಹಿಸಿದ್ದಾರೆಂದು ತಿಳಿಸಿದರು.

ಜಿಲ್ಲೆಯ ಹತ್ತು ಲಕ್ಷ ಜನತೆ ಅಭಿವೃದ್ಧಿಗೆ ಕೋಟ್ಯಾಂತರ ರು.ಗಳನ್ನು ರಾಜ್ಯ ಸರ್ಕಾರ ಭರಿಸಿ ಅನುಕೂಲ ಕಲ್ಪಿಸಿದೆ. ಅನ್ನ ಭಾಗ್ಯ ಯೋಜನೆ ನುಡಿದಂತೆ ನಡೆದುಕೊಂಡಿದೆ. ಪಡಿತರ ಚೀಟಿದಾರರ ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ವಿತರಿಸುತ್ತಿದೆ ಮತ್ತು ಪಂಚ ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಜಾರಿಗೊಳಿಸುತ್ತಿದ್ದು ಫಲಾನುಭವಿಗಳು ಸರ್ಕಾರಕ್ಕೆ ಕೃತಜ್ಞರಾಗಬೇಕು ಎಂದು ತಿಳಿಸಿದರು.

ಸರ್ಕಾರ ಹಣದ ಬದಲಾಗಿ ಅಕ್ಕಿ ವಿತರಿಸುತ್ತಿದ್ದು, ಪಡಿತರದಾರರು ಕಾಳಸಂತೆಯಲ್ಲಿ ಮಾರಾಟ ಮಾಡದೇ, ಜೀವ ನೋಪಾಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಕೆಲವೆಡೆ ತಾಂತ್ರಿಕ ದೋಷದಿಂದ ಸಣ್ಣಪುಟ್ಟ ಸಮಸ್ಯೆಯಿದೆ ಹೊರತು ಉಳಿದೆಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ಆದೇಶದಂತೆ ಸಂಪೂರ್ಣ ಅಕ್ಕಿ ವಿತರಿಸಿ ಶೇ.99 ರಷ್ಟು ಪ್ರಗತಿ ಸಾಧಿಸಿದೆ ಎಂದರು.

ಇಂದಿಗೂ ಜಿಲ್ಲೆಯಲ್ಲಿ ಬಹುತೇಕ ಮಂದಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದುಕೊಂಡಿವೆ. ಆದರೆ ಒಬ್ಬರಾದರೂ ಯೋಜನೆಗಳ ಸೌಲಭ್ಯ ಬೇಡವೆಂದು ಹೇಳಿಲ್ಲ. ಹೀಗಾಗಿ ಜನತೆ ವಿರೋಧ ಪಕ್ಷಗಳ ಮಾತಿಗೆ ಕಿವಿಗೊಡದೇ ಯೋಜನೆ ಗಳನ್ನು ಉಪಯೋಗಿಸಿಕೊಳ್ಳಬೇಕು. ಜೊತೆಗೆ ಮುಸ್ಲೀಂ ಬಾಂಧವರಿಗೆ ರಂಜಾನ್ ಮಾಸಾಚರಣೆ ಹಿನ್ನೆಲೆ ಸರ್ವರಿಗೂ ಒಳಿತಾಗಲೀ ಎಂದು ಶುಭ ಕೋರಿದರು.

ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಲಕ್ಯಾ, ಮುಗುಳುವಳ್ಳಿ ಮತ್ತು ಮೂಗ್ತಿಹಳ್ಳಿ ಹಾಗೂ ನಗರ ಪ್ರದೇಶದ ನೆಹರುನಗರ, ಉಪ್ಪಳ್ಳಿ ನ್ಯಾಯಬೆಲೆ ಅಂಗಡಿಗಳ ಅಕ್ಕಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪಡಿತರ ಚೀಟಿದಾರರಿಗೆ ಸಮಗ್ರ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಅನ್ಸರ್, ಅರಸ್, ಜಯಂತಿ, ನಾಗಣ್ಣ, ಧರ್ಮಯ್ಯ, ನಗರಸಭಾ ಸದಸ್ಯರಾದ ಅಮೃತೇಶ್, ಮುನೀರ್ ಅಹ್ಮದ್, ಲಕ್ಷ್ಮಣ್‌, ಖಲಂದರ್‌ ಹಾಜರಿದ್ದರು.

21 ಕೆಸಿಕೆಎಂ 1ಚಿಕ್ಕಮಗಳೂರಿನ ನ್ಯಾಯಬೆಲೆ ಅಂಗಡಿ ಹಾಗೂ ಸಹಕಾರ ಸಂಘಗಳ ಅಕ್ಕಿ ವಿತರಣಾ ಕೇಂದ್ರಗಳಿಗೆ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಪಡಿತರ ವಿತರಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌