ಬೆಂಗಳೂರು : ಜಾತಿ ಆಧಾರಿತ ಹಿಂಸೆ, ಹಲ್ಲೆ, ಮರ್ಯಾದೆಗೇಡು ಹತ್ಯೆಯನ್ನು ಸರ್ಕಾರ ಸಹಿಸಲು ಸಾಧ್ಯವಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾನೂನು ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ

ಈ ಬಗ್ಗೆ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಅವರು, ‘ಇಂಥ ಕಾನೂನುಬಾಹಿರ ಘಟನೆಗಳನ್ನು ನಿಯಂತ್ರಿಸಲು ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದ ಮಾನ್ಯ ಎಂಬ ಯುವತಿಯ ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿ ಪ್ರಕರಣದ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ. ಈ ಹಿನ್ನೆಲೆಯಲ್ಲಿ ತ್ವರಿತಗತಿ ನ್ಯಾಯಾಲಯ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದೂ ಭರವಸೆ ನೀಡಿದ್ದಾರೆ.


60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ

ಇಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಟ್ರಾಸಿಟಿ ಪ್ರಕರಣವಾಗಿರುವುದರಿಂದ 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್‌ ಅನ್ನು ನೇಮಿಸಲು ಕ್ರಮ ವಹಿಸಲಾಗಿದೆ. ಹೆಣ್ಣುಮಗಳೊಬ್ಬಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧರಿತ ಹಿಂಸೆ-ಹಲ್ಲೆ, ಮರ್ಯಾದೆಗೇಡು ಹತ್ಯೆಯಂಥ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂಥ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.