ಜಿಲ್ಲಾ ಕೇಂದ್ರ ಹಾವೇರಿ ನಗರದ ಗುಂಡಿ ಬಿದ್ದಿದ್ದ ರಸ್ತೆಗಳು ಏಕಾಏಕಿಯಾಗಿ ತೇಪೆ ಹಚ್ಚಲಾಗುತ್ತಿದೆ. ಮುಖ್ಯರಸ್ತೆಯಲ್ಲಿನ ಹಾರುತ್ತಿದ್ದ ಧೂಳು ಸ್ವಚ್ಛಗೊಳ್ಳುತ್ತಿದ್ದರೆ, ಹಲವು ವರ್ಷಗಳ ಬಳಿಕ ಡಿವೈಡರ್ ಬಣ್ಣ ಕಾಣುತ್ತಿದೆ.

ನಾರಾಯಣ ಹೆಗಡೆ

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರದ ಗುಂಡಿ ಬಿದ್ದಿದ್ದ ರಸ್ತೆಗಳು ಏಕಾಏಕಿಯಾಗಿ ತೇಪೆ ಹಚ್ಚಲಾಗುತ್ತಿದೆ. ಮುಖ್ಯರಸ್ತೆಯಲ್ಲಿನ ಹಾರುತ್ತಿದ್ದ ಧೂಳು ಸ್ವಚ್ಛಗೊಳ್ಳುತ್ತಿದ್ದರೆ, ಹಲವು ವರ್ಷಗಳ ಬಳಿಕ ಡಿವೈಡರ್ ಬಣ್ಣ ಕಾಣುತ್ತಿದೆ.

ಹೊಸ ವರ್ಷದ ಆರಂಭದಲ್ಲೇ ಯಾಲಕ್ಕಿ ಕಂಪಿನ ನಗರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದುಕೊಳ್ಳಬೇಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 7ರಂದು ಹಾವೇರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಸೌಂದರ್ಯೀಕರಣ ಕಾಮಗಾರಿಯಿದು. ಸುಮಾರು ₹500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೆಡಿಕಲ್‌ ಕಾಲೇಜು ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟದ ಹಲವು ಸಚಿವರು, ಕೇಂದ್ರದ ಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಹಳೆಯ ಪಿಬಿ ರಸ್ತೆಯ ಅಂದ ಹೆಚ್ಚಿಸಲಾಗುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ಧೂಳನ್ನು ಕಾರ್ಮಿಕರು ಕಳೆದ ನಾಲ್ಕಾರು ದಿನಗಳಿಂದ ತೆಗೆಯುತ್ತಿದ್ದಾರೆ. ರಸ್ತೆ ಮಧ್ಯೆ ಡಿವೈಡರ್‌ಗೆ ಬಣ್ಣ ಬಳಿಯುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಗಳಿಂದ ರಸ್ತೆ ಪಕ್ಕ ತಗ್ಗು ಬಿದ್ದಲ್ಲಿ ತಾತ್ಕಾಲಿಕವಾಗಿ ಡಾಂಬರು ಹಾಕಿ ತೇಪೆ ಹಾಕುವ ಕೆಲಸವೂ ನಡೆದಿದೆ. ಇತ್ತೀಚೆಗಷ್ಟೇ ಹುಕ್ಕೇರಿಮಠದ ಜಾತ್ರೆ ಹಿನ್ನೆಲೆಯಲ್ಲಿ ಕಳೆಗಟ್ಟಿದ್ದ ನಗರವು ಈಗ ಮತ್ತಷ್ಟು ಹೊಳಪಾಗುತ್ತಿದೆ.

ಮೆಡಿಕಲ್‌ ಕಾಲೇಜು ಉದ್ಘಾಟನೆಗೆ ಮುಹೂರ್ತ: ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಆರಂಭಗೊಂಡು ಈಗಾಗಲೇ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಾಮಗಾರಿ ಮುಗಿದು ಬರೋಬ್ಬರಿ 30 ತಿಂಗಳ ಬಳಿಕ ಈಗ ಅಧಿಕೃತವಾಗಿ ಉದ್ಘಾಟನೆಗೊಳ್ಳುತ್ತಿದೆ. ಜ. 7ರಂದು ಮೆಡಿಕಲ್ ಕಾಲೇಜ್ ಉದ್ಘಾಟನೆಗೆ ಮಹೂರ್ತ ನಿಗದಿಯಾಗಿದೆ. 2020ರ ನ. 13ರಂದು ಆಗ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿದ್ದರು. ಅದಾದ ಬಳಿಕ ಎಂಜಿನಿಯರಿಂಗ್‌ ಕಾಲೇಜಿನಲ್ಲೇ ಮೆಡಿಕಲ್‌ ಕಾಲೇಜು ತರಗತಿ ಆರಂಭಿಸಲಾಗಿತ್ತು. 2022-23ನೇ ಸಾಲಿನಲ್ಲಿ ಹಾವೇರಿ ನಗರದ ಹೊರವಲಯದಲ್ಲಿ ದೇವಗಿರಿ ಗ್ರಾಪಂ ವ್ಯಾಪ್ತಿಯ ಒಟ್ಟು 53 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್‌, ತರಗತಿ ಕೊಠಡಿ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗಲೇ ಕಟ್ಟಡದ ಬಹುತೇಕ ಕಾಮಗಾರಿ ಮುಗಿದರೂ ಈಗ ಉದ್ಘಾಟನೆ ಭಾಗ್ಯ ಕಾಣುತ್ತಿದೆ.

ಕಡಿಮೆ ವೆಚ್ಚದಲ್ಲಿ ಮಾದರಿ ಕಟ್ಟಡ:ಮೆಡಿಕಲ್ ಕಾಲೇಜಿನ ಯೋಜನಾ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪಾಲು ಶೇ. 60 ಹಾಗೂ ರಾಜ್ಯ ಸರ್ಕಾರದ ಪಾಲು ಶೇ. 40ರಷ್ಟಿದೆ. 2020ರ ಮಾರ್ಚ್‌ನಲ್ಲಿ ಮೆಡಿಕಲ್ ಕಾಲೇಜು ಕ್ಯಾಂಪಸ್‌ನ ಕಟ್ಟಡಗಳ ನಿರ್ಮಾಣಕ್ಕೆ ಒಟ್ಟು ₹365 ಕೋಟಿ ಅಂದಾಜು ವೆಚ್ಚನಿಗದಿಪಡಿಸಲಾಗಿತ್ತು.

7 ಎಕರೆ ಹೆಚ್ಚುವರಿ ಭೂಮಿಯನ್ನು ಖಾಸಗಿಯವರಿಂದ ಕೊಳ್ಳಲಾಗಿದೆ. ಪ್ರಸ್ತುತ ಸುಸಜ್ಜಿತ ಕಟ್ಟಡಗಳ ನಿರ್ಮಾಣವಾಗಿದ್ದು, ವೈದ್ಯಕೀಯ ಪರಿಕರಗಳ ಸಹಿತ ಯೋಜನಾ ವೆಚ್ಚ ₹478.50 ಕೋಟಿಗೆ ಏರಿಕೆಯಾಗಿದೆ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರವು ಸುಮಾರು ₹150 ಕೋಟಿ ಅನುದಾನ ನೀಡಿದೆ. ಈ ಪೈಕಿ ₹468 ಕೋಟಿ ಈಗಾಗಲೇ ಖರ್ಚಾಗಿದೆ. ರಾಜ್ಯದಲ್ಲಿ ಏಕಕಾಲಕ್ಕೆ ಮಂಜೂರಾದ ನಾಲ್ಕು ವೈದ್ಯಕೀಯ ಕಾಲೇಜುಗಳ ಪೈಕಿ ಇದು ಮಾದರಿ ಎಂದು ಹೇಳಲಾಗುತ್ತಿದೆ.

600 ಎಂಬಿಬಿಎಸ್ ವಿದ್ಯಾರ್ಥಿಗಳು: ಪ್ರಸ್ತುತ ಒಂದರಿಂದ 4ನೇ ವರ್ಷದ ವರೆಗೆ ಒಟ್ಟು 600 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ವಸತಿ ನಿಲಯ, ಶಿಕ್ಷಕರ ವಸತಿ ಕಟ್ಟಡಗಳು ನಿರ್ಮಾಣವಾಗಿದೆ. ವೈದ್ಯಕೀಯ ಕಲಿಕೆಗೆ ಅಗತ್ಯವಿರುವ ಎಲ್ಲ 20 ವಿಭಾಗಗಳ ಶೈಕ್ಷಣಿಕ ಪರಿಕರಗಳು, ಮೂಲ ಸೌಕರ್ಯ ಅಳವಡಿಕೆಯಾಗಿದೆ. ಅಲ್ಲದೇ 40 ಜೆಎನ್‌ಎಂಸಿ, 40 ಬಿಎಸ್ಸಿ ಸೀಟ್‌ಗಳನ್ನು ಹೊಂದಿರುವ ನರ್ಸಿಂಗ್‌ ಕಾಲೇಜು ಕೂಡ ಶುರುವಾಗಿದೆ. 17 ಎಂಡಿ ಸೀಟ್‌ ಕೂಡ ಸಿಕ್ಕಿದೆ. ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮೆಡಿಕಲ್‌ ಕಾಲೇಜು ಆರಂಭವು ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಡಿಕಲ್‌ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಪ್ರಹ್ಲಾದ ಜೋಶಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಮಾದರಿಯಾಗುವ ರೀತಿಯಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.