ಪ್ರತಿ ಜಿಲ್ಲೆಯಲ್ಲೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು, ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆಯೋಜಿಸಲಾಗಿದ್ದ 23 ನೇ ಚಿತ್ರಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಬೆಂಗಳೂರು : ಪ್ರತಿ ಜಿಲ್ಲೆಯಲ್ಲೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು, ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಭಾನುವಾರ ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ನಗರದ ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆಯೋಜಿಸಲಾಗಿದ್ದ 23 ನೇ ಚಿತ್ರಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ ಇದ್ದಂತೆ. ಕಲಾವಿದರು, ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ. ಕಲಾವಿದರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿಸುವ ಕೆಲಸವನ್ನು ಚಿತ್ರಕಲಾ ಪರಿಷತ್ತು 60 ವರ್ಷಗಳಿಂದ ಮಾಡುತ್ತಾ ಬಂದಿದೆ. ಚಿತ್ರಸಂತೆ ತನ್ನ 23ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 22 ರಾಜ್ಯಗಳು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದರು.

ಈ ಬಾರಿಯ ಚಿತ್ರ ಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಸೇರಿ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯ ಎಂದರು.

ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿ ನೆಡುವ ಯೋಜನೆ ಸರ್ಕಾರ ಹಮ್ಮಿಕೊಂಡಿದೆ. ಯಾವುದೇ ಪ್ರದೇಶದಲ್ಲಿ ಶೇ.30ರಷ್ಟು ಕಾಡು ಇರಬೇಕು. ನಮ್ಮ ರಾಜ್ಯದಲ್ಲಿ ಕೇವಲ ಶೇ.20ರಷ್ಟು ಅರಣ್ಯ ಪ್ರದೇಶವಿದ್ದು, ಅದನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಸಾಲು ಮರದ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಸಿಗಲು ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಇದ್ದರು.

ಮರ್ಯಾದಾ ಹತ್ಯೆಯಂಥ ಕೃತ್ಯ ತಡೆಗೆ ವಿಶೇಷ ಕಾನೂನು:

ಜಾತಿ ಆಧಾರಿತ ಹಿಂಸೆ, ಹಲ್ಲೆ, ಮರ್ಯಾದೆಗೇಡು ಹತ್ಯೆಯನ್ನು ಸರ್ಕಾರ ಸಹಿಸಲು ಸಾಧ್ಯವಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾನೂನು ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಅವರು, ‘ಇಂಥ ಕಾನೂನುಬಾಹಿರ ಘಟನೆಗಳನ್ನು ನಿಯಂತ್ರಿಸಲು ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದ ಮಾನ್ಯ ಎಂಬ ಯುವತಿಯ ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿ ಪ್ರಕರಣದ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ. ಈ ಹಿನ್ನೆಲೆಯಲ್ಲಿ ತ್ವರಿತಗತಿ ನ್ಯಾಯಾಲಯ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದೂ ಭರವಸೆ ನೀಡಿದ್ದಾರೆ.ಇಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಟ್ರಾಸಿಟಿ ಪ್ರಕರಣವಾಗಿರುವುದರಿಂದ 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್‌ ಅನ್ನು ನೇಮಿಸಲು ಕ್ರಮ ವಹಿಸಲಾಗಿದೆ. ಹೆಣ್ಣುಮಗಳೊಬ್ಬಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧರಿತ ಹಿಂಸೆ-ಹಲ್ಲೆ, ಮರ್ಯಾದೆಗೇಡು ಹತ್ಯೆಯಂಥ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂಥ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.