ದಿವಂಗತ ಆಂಜನೇಯರೆಡ್ಡಿಯವರ ಗುಣ, ವರ್ಚಸ್ಸು ಸಚಿವ ಡಾ.ಎಂ.ಸಿ.ಸುಧಾಕರ್‌ರಲ್ಲಿ ನೋಡುತ್ತಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸಹಾಯ ಮಾಡಿರುವವರನ್ನು ಮರೆಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ನಮ್ಮ ಸಮುದಾಯಕ್ಕೆ ೩೦ ಕೋಟಿ ರು.ಗಳನ್ನು ಕೊಟ್ಟಿರುವುದರಿಂದ ಕಾಂಗ್ರೆಸ್ ಸರ್ಕಾರವನ್ನು ಅಭಿನಂದಿಸುತ್ತೇವೆ. ಸಚಿವರು ನಮ್ಮ ಸಮುದಾಯದೊಂದಿಗೆ ಇದ್ದರೆ ನಾವು ಕೂಡ ಅವರೊಂದಿಗೆ ಇರುತ್ತೇವೆ.
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಸಿಎಂ ಸಿದ್ದರಾಮಯ್ಯನವರು ಬಡತನದಿಂದ ಬಂದವರಾಗಿದ್ದು, ಸಮಾಜದಲ್ಲಿ ಒಂದು ವರ್ಗದ ಪರ ಕೆಲಸ ಮಾಡುತ್ತಿಲ್ಲ. ಎಲ್ಲಾ ಸಮುದಾಯದ ಬಡವರ ಪರ ಕೆಲಸ ಮಾಡುವ ಸದುದ್ದೇಶ ಹೊಂದಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನುಡಿದರು.ನಗರದ ತಾಪಂ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಆಯೋಜಿಸಿದ್ದ ವಿಪ್ರ ಸ್ವ- ಉದ್ಯೋಗ ನೇರಸಾಲ ಯೋಜನೆಯ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಮುಖ್ಯಮಂತ್ರಿಗಳ ಜೊತೆ ನಿಂತು ರಾಜ್ಯದಲ್ಲಿ ಅಭಿವೃದ್ಧಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು. ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರ ೧ ಲಕ್ಷಕ್ಕೆ ೨೦ ಸಾವಿರ ಸಹಾಯಧನ ಕೊಡುತ್ತಿದ್ದು, ಉಳಿದ ಹಣಕ್ಕೆ ಶೇ.೪ರ ಬಡ್ಡಿ ರೂಪದಲ್ಲಿ ಸಾಲ ಕೊಡುತ್ತಿದೆ. ಬ್ರಾಹ್ಮಣ ಸಮುದಾಯದವರು ಬಹಳಷ್ಟು ಬುದ್ಧಿವಂತಿಕೆಯುಳ್ಳವರಾಗಿದ್ದು, ಅದು ಅವರಿಗೆ ವಂಶಪಾರಂಪರ್ಯವಾಗಿ ಬಂದಿರುವ ಬಳುವಳಿಯಾಗಿದೆ. ಆದರೆ ಬ್ರಾಹ್ಮಣ ಸಮುದಾಯದವರೆಂದರೆ ಆರ್ಥಿಕವಾಗಿ ಮುಂದಿದ್ದಾರೆಂಬ ತಪ್ಪು ಕಲ್ಪನೆ ಸಮಾಜದಲ್ಲಿ ಇದೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಬಹಳಷ್ಟು ಮಂದಿ ಬ್ರಾಹ್ಮಣ ಸಮಾಜದಲ್ಲಿದ್ದಾರೆ. ಅದರಂತೆ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ದೊಡ್ಡಮಟ್ಟದಲ್ಲಿ ಕೀರ್ತಿ ತಂದುಕೊಟ್ಟಿರುವವರೂ ಇದ್ದಾರೆ ಎಂದರು.
ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಲಿ ಮೂಲಕ ಆರ್ಥಿಕ ಚೈತನ್ಯ ತುಂಬಲು ೧೫ ಸಾವಿರ ರು. , ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ೧ ಲಕ್ಷದವರೆಗೂ ಶಿಷ್ಯವೇತನ ಯೋಜನೆ, ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ, ಐಎಎಸ್ ಮತ್ತು ಕೆಎಎಸ್ ತರಬೇತಿ ಪಡೆಯಲು ೧ ಲಕ್ಷದವರೆಗೂ ಸಹಾಯಧನ ಕೊಡುತ್ತಿದ್ದು ಸಮುದಾಯದವರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಬ್ರಾಹ್ಮಣ ಸಮಾಜದವರಿಗೆ ೨೦ ಗುಂಟೆ ಜಾಗವನ್ನು ಮೀಸಲಿಡಲಾಗಿದೆ. ಕೆಲವರು ರಾಜಕಾರಣ ಮಾಡುವ ನೆಪದಲ್ಲಿ ಕೈಲಾಸಗಿರಿ ದೇವಸ್ಥಾನ ಅಭಿವೃದ್ಧಿಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಾರೆ. ಅವರಿಗೆ ಡೀಮ್ಡ್ ಫಾರೆಸ್ಟ್ ಎಂದರೆ ಏನೂ ಗೊತ್ತಿಲ್ಲ. ಅವರಿಗೆ ಕಾನೂನಿನ ಅರಿವಿಲ್ಲ ಎಂದು ಮಾಜಿ ಶಾಸಕರನ್ನು ಪರೋಕ್ಷವಾಗಿ ಟೀಕೆ ಮಾಡಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ತಾಲೂಕಿನ ಹಲವಾರು ದೇವಾಲಯಗಳಿಗೆ ೩ ಕೋಟಿ ರು. ಅನುದಾನ ಕೊಡಿಸಿದ್ದೇನೆ. ಇಂದು ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿಯವರ ತ್ಯಾಗದಿಂದ ನಾವು ಸ್ವತಂತ್ರರಾಗಿದ್ದೇವೆ. ಚುನಾವಣೆ ಸಮಯದಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುವುದು ಸರಿಯಲ್ಲ. ದೇಶ ಪ್ರಗತಿಯಲ್ಲಿ ನಡೆಯಬೇಕಾದರೆ, ನಮ್ಮ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಚಿಂತಾಮಣಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಮಾದರಿಯಾಗಬೇಕು. ಯಾವುದೇ ತಾಲೂಕಿನಲ್ಲಿ ಇಲ್ಲದಿರುವ ಸೌಲಭ್ಯಗಳನ್ನು ನಮ್ಮ ತಾಲೂಕಿಗೆ ತರಬೇಕೆಂಬ ಉದ್ದೇಶದಿಂದ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಿ ವೇಗವಾಗಿ ನಡೆಯುತ್ತಿವೆ. ಎಲ್ಲಾ ಧರ್ಮದವರಿಗೂ ನ್ಯಾಯ ಕೊಡಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕೆನ್ನುವುದೇ ನನ್ನ ಉದ್ದೇಶ ಎಂದರು.
ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ದಿವಂಗತ ಆಂಜನೇಯರೆಡ್ಡಿಯವರ ಗುಣ, ವರ್ಚಸ್ಸು ಸಚಿವ ಡಾ.ಎಂ.ಸಿ.ಸುಧಾಕರ್‌ರಲ್ಲಿ ನೋಡುತ್ತಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸಹಾಯ ಮಾಡಿರುವವರನ್ನು ಮರೆಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ನಮ್ಮ ಸಮುದಾಯಕ್ಕೆ ೩೦ ಕೋಟಿ ರು.ಗಳನ್ನು ಕೊಟ್ಟಿರುವುದರಿಂದ ಕಾಂಗ್ರೆಸ್ ಸರ್ಕಾರವನ್ನು ಅಭಿನಂದಿಸುತ್ತೇವೆ. ಸಚಿವರು ನಮ್ಮ ಸಮುದಾಯದೊಂದಿಗೆ ಇದ್ದರೆ ನಾವು ಕೂಡ ಅವರೊಂದಿಗೆ ಇರುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭು ಜಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ತಹಸೀಲ್ದಾರ್ ಸುದರ್ಶನ್ ಯಾದವ್, ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೌರಾಯುಕ್ತ ಚಲಪತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ, ಬ್ರಾಹ್ಮಣ ಸಂಘದ ತಾಲೂಕು ಅಧ್ಯಕ್ಷ ಎನ್.ಕೃಷ್ಣ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗದೀಶ್‌ರಾವ್, ಎಸ್.ಆರ್.ಇ.ಟಿ. ನಾಗೇಶ್, ನಗರಸಭಾ ಮಾಜಿ ಸದಸ್ಯ ಎಸ್.ಸುಬ್ರಮಣ್ಯಂ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ವಿ.ರವಿಪ್ರಕಾಶ್, ತಾಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿ ಲಕ್ಷ್ಮಪ್ಪ, ಉಪಾಧ್ಯಕ್ಷ ಮುರಳಿಧರ್ ಆರ್, ಪದಾಧಿಕಾರಿಗಳಾದ ರಮೇಶ್ ಶರ್ಮ, ಚಲಪತಿಶಾಸ್ತ್ರೀ, ಸೋಮಶೇಖರ್, ವಿಜಯಲಕ್ಷ್ಮೀ, ವಾಸುದೇವಮೂರ್ತಿ, ಕೌಶಿಕ್, ಲಕ್ಷ್ಮೀನಾರಾಯಣ್, ಸುರೇಶ್, ಟಿ.ಎಲ್.ಆನಂದ್, ಬಿ.ಕೆ.ಕೃಷ್ಣಮೂರ್ತಿ, ಮುಖಂಡರಾದ ಜಿ.ವಿ.ರಾಘವೇಂದ್ರ, ಜಯ ರಾಘು ಎಸ್.ಆರ್.ಇ.ಟಿ.ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು.