ಶಿಕಾರಿಪುರದ ಮುಸ್ಲಿಂಮರೇ ಇಲ್ಲದ ಊರಲ್ಲಿ ಅದ್ಧೂರಿ ಮೊಹರಂ

KannadaprabhaNewsNetwork |  
Published : Jun 28, 2026, 02:45 AM IST
27ಎಸ್‌ಎಂಜಿಕೆಪಿ04ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಶೀರಿಹಳ್ಳಿ ತಾಂಡಾದಲ್ಲಿ ಬಂಜಾರ ಸಮುದಾಯದವರಿಂದ ಮೊಹರಂ ಹಬ್ಬ ಆಚರಣೆ ಮಾಡಲಾಯಿತು.   | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜದಲ್ಲಿ ಗೋಡೆಗಳು ಸೃಷ್ಟಿಯಾಗುತ್ತಿರುವ ನಡುವೆಯೇ, ಶಿವಮೊಗ್ಗ ಜಿಲ್ಲೆಯಲ್ಲಿ ಸೌಹಾರ್ದತೆ ಮತ್ತು ಕೋಮು ಸೌಹಾರ್ದತೆಯ ಅಪರೂಪದ ಹಾಗೂ ಹೆಮ್ಮೆಯ ಆಚರಣೆ ಚಾಲ್ತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜದಲ್ಲಿ ಗೋಡೆಗಳು ಸೃಷ್ಟಿಯಾಗುತ್ತಿರುವ ನಡುವೆಯೇ, ಶಿವಮೊಗ್ಗ ಜಿಲ್ಲೆಯಲ್ಲಿ ಸೌಹಾರ್ದತೆ ಮತ್ತು ಕೋಮು ಸೌಹಾರ್ದತೆಯ ಅಪರೂಪದ ಹಾಗೂ ಹೆಮ್ಮೆಯ ಆಚರಣೆ ಚಾಲ್ತಿಯಲ್ಲಿದೆ.

ಒಂದೇ ಒಂದು ಮುಸ್ಲಿಂ ಕುಟುಂಬವೂ ಇಲ್ಲದ ಗ್ರಾಮವೊಂದರಲ್ಲಿ ಇಡೀ ಬಂಜಾರ ಸಮುದಾಯದ ಜನರು ಒಟ್ಟಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಸಮಾಜಕ್ಕೆ ಮಾದರಿ, ದಾರಿದೀಪವಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಈ ವಿಶಿಷ್ಟ ಮತ್ತು ಭಾವೈಕ್ಯತೆಯ ಆಚರಣೆ ನಡೆದಿದೆ. ಈ ತಾಂಡಾದಲ್ಲಿ ಸಂಪೂರ್ಣವಾಗಿ ಬಂಜಾರ ಸಮುದಾಯದವರೇ ವಾಸವಾಗಿದ್ದು, ಇಲ್ಲಿ ಯಾವುದೇ ಮುಸ್ಲಿಂ ಮನೆಗಳಿಲ್ಲ. ಆದಾಗ್ಯೂ, ಇಲ್ಲಿನ ಜನರಿಗೆ ಮೊಹರಂ ಹಬ್ಬದ ಮೇಲಿರುವ ಭಕ್ತಿ ಹಾಗೂ ನಂಬಿಕೆ ಮಾತ್ರ ಅನನ್ಯವಾದದ್ದು. ಪ್ರತಿ ವರ್ಷದಂತೆ ಈ ಬಾರಿಯೂ ಇಡೀ ತಾಂಡಾದ ಜನತೆ ಒಂದಾಗಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ.

ಮೂರು ದಿನಗಳ ಕಾಲ ಪೂಜೆ: ಶೀರಿಹಳ್ಳಿ ತಾಂಡಾದಲ್ಲಿ ಸತತ ಮೂರು ದಿನಗಳ ಕಾಲ ಮೊಹರಂ ಆಚರಣೆಯ ಸಡಗರ ಮನೆಮಾಡಿತ್ತು. ಬಂಜಾರ ಸಮುದಾಯದ ಹಿರಿಯರು ಹಾಗೂ ಯುವಕರು ಸೇರಿ ಗ್ರಾಮದ ಖಾಜಾ ಬಂಧನ್ ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳೊಂದಿಗೆ ‘ಅಲೈದೇವರನ್ನು’ ಪ್ರತಿಷ್ಠಾಪಿಸಿ, ಮೂರು ದಿನಗಳ ಕಾಲ ನಿಷ್ಠೆಯಿಂದ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಹಾಗೂ ನೈವೇದ್ಯಗಳನ್ನು ಸಲ್ಲಿಸಿದರು.

ಬಂಜಾರ ಸಂಪ್ರದಾಯದ ಗಾಯನ: ಮೆರವಣಿಗೆಯ ಉದ್ದಕ್ಕೂ ಬಂಜಾರ ಸಮುದಾಯದ ಮಹಿಳೆಯರು ಮತ್ತು ಪುರುಷರು ತಮ್ಮದೇ ಆದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಸಾಂಸ್ಕೃತಿಕ ಹಾಡುಗಳು ಹಾಗೂ ಭಜನೆಗಳ ಮೂಲಕ ಅಲೈ ದೇವರಿಗೆ ವಿಶಿಷ್ಟವಾಗಿ ಭಕ್ತಿ ಸಮರ್ಪಿಸಿದರು. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೆ ಕಲೆಯ ಸಮ್ಮಿಲನವಾಗಿತ್ತು.

ಕಷ್ಟಗಳನ್ನು ನೀಗಿಸುವ ದೇವರೆಂಬ ನಂಬಿಕೆ:

ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ತಾಂಡಾದ ಭಕ್ತರು ತಮ್ಮ ಜೀವನದ ಕಷ್ಟ-ಕಾರ್ಪಣ್ಯಗಳನ್ನು, ಅನಾರೋಗ್ಯದ ಸಮಸ್ಯೆಗಳನ್ನು ಅಲೈ ದೇವರ ಮುಂದೆ ಪ್ರಾರ್ಥಿಸಿಕೊಂಡು ಹೇಳಿಕೊಳ್ಳುತ್ತಾರೆ. ಇದೇ ವೇಳೆ ದೇವರಿಂದ ''''''''ಹೇಳಿಕೆ'''''''' (ಅಪ್ಪಣೆ ಅಥವಾ ಭವಿಷ್ಯದ ನುಡಿ) ಕೇಳುವ ವಿಶಿಷ್ಟ ಸಂಪ್ರದಾಯವೂ ಇಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.ಮೂರನೇ ದಿನದಂದು ತಾಂಡಾದ ಬೀದಿ ಬೀದಿಗಳಲ್ಲಿ ಅಲೈ ದೇವರ ಅದ್ದೂರಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ತಡೋ ದೇವರ ಬಳಿ ಹೋಗಿ ಪೂಜೆ ಸಲ್ಲಿಸಲಾಗುತ್ತೆ ನಂತರ, ಮೂರು ದಿನಗಳ ಕಾಲ ಶ್ರದ್ಧೆಯಿಂದ ವ್ರತ ಆಚರಿಸಿ ಧರಿಸಿದ್ದ ‘ಅಲೈ ಮಾಲೆ’ಯನ್ನು ಭಕ್ತರು ಕೆರೆ ನೀರಿನಲ್ಲಿ ವಿಸರ್ಜನೆ ಮಾಡಿದರು. ನೀರಲ್ಲಿ ಬಿಟ್ಟು ಪೂಜೆ ಸಲ್ಲಿಸುವುದರೊಂದಿಗೆ ಈ ವರ್ಷದ ಸೌಹಾರ್ದತೆಯ ಮೊಹರಂ ಆಚರಣೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ: ಡಾ.ಸಿ.ಎಂ.ಅರವಿಂದ್