ಕನ್ನಡಪ್ರಭ ವಾರ್ತೆ ಹಿರಿಯೂರು
ಬೆಂಗಳೂರು ಜಾಗತಿಕ ಮಟ್ಟದ ಮಹಾನಗರವಾಗಿ ಬೆಳೆಯಲು ಕೆಂಪೇಗೌಡರ ದೂರದೃಷ್ಟಿಯ ಆಡಳಿತ ಮತ್ತು ನಗರ ನಿರ್ಮಾಣದ ಕೌಶಲ್ಯವೇ ಮೂಲ ಕಾರಣ ಎಂದು ತಹಸೀಲ್ದಾರ್ ಎಂ.ಸಿದ್ದೇಶ್ ಹೇಳಿದರು.ಇಲ್ಲಿನ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಂಪೇಗೌಡರ ಆಡಳಿತದ ಆಲೋಚನಾ ವೇಗದ ಫಲಶ್ರುತಿ ಇಂದು ಕಣ್ಣಮುಂದಿದೆ. ಅವರ ಆಡಳಿತದಲ್ಲಿ ಕೆರೆಗಳನ್ನು ಕಟ್ಟಿಸಿ ಗಿಡಮರಗಳನ್ನು ಬೆಳೆಸುವುದಕ್ಕೆ ಆದ್ಯತೆ ನೀಡಿದ್ದರು. ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿ ನಗರದ ನಾಲ್ಕು ದಿಕ್ಕುಗಳಲ್ಲೂ ಗಡಿಗೋಪುರಗಳನ್ನು ನಿರ್ಮಿಸಿದ್ದರು ಎಂದರು.ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕೃಷಿ ಅಭಿವೃದ್ಧಿಗೆ ಒತ್ತು ನೀಡಿದ್ದರು. ವ್ಯಾಪಾರಿಗಳ ಹಿತದೃಷ್ಟಿಯಿಂದ ಹಲವಾರು ಪೇಟೆಗಳನ್ನು ನಿರ್ಮಿಸಿ ಆರ್ಥಿಕ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ್ದರು. ಸ್ವತಃ ವಿದ್ವಾoಸರಾಗಿದ್ದ ಕೆಂಪೇಗೌಡರು ಸಾಹಿತ್ಯ ಪೋಷಕರಾಗಿದ್ದರು. ನಗರದ ರಕ್ಷಣೆಗಾಗಿ ಕೋಟೆ ಕಂದಕಗಳನ್ನು ನಿರ್ಮಿಸಿ ಅಜರಾಮರವಾಗಿ ಉಳಿಯುವಂತಹ ಆಡಳಿತ ನೀಡಿದರು ಎಂದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ್ ಮಾತನಾಡಿ, ನಾಡಪ್ರಭುಗಳ ಜನಸೇವೆಯ ಆಡಳಿತ ನಮ್ಮೆಲ್ಲರಿಗೂ ಮಾದರಿಯಾಗಬೇಕು. ಒಂದು ನಾಡನ್ನು ಸರ್ವಾoಗೀಣವಾಗಿ ಹೇಗೆ ಅಭಿವೃದ್ಧಿ ಮಾಡಬೇಕು ಎಂಬುದನ್ನು ಕೆಂಪೇಗೌಡರು ಅಂದೇ ತೋರಿಸಿಕೊಟ್ಟಿದ್ದಾರೆ. ಜನಪರ ಆಡಳಿತ, ದೂರದೃಷ್ಟಿ ಹಾಗೂ ಅಭಿವೃದ್ಧಿಯ ಆಳ್ವಿಕೆಯನ್ನು ನಾವು ಕೆಂಪೇಗೌಡರ ಅವಧಿಯಲ್ಲಿ ಕಾಣಬಹುದು. ಅವರನ್ನು ಸ್ಮರಿಸುವುದಷ್ಟೇ ಅಲ್ಲ ಅವರ ಆಡಳಿತದ ಆದರ್ಶಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾoಶುಪಾಲ ಡಾ.ಡಿ.ಧರಣೇoದ್ರಯ್ಯ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ಕಂದಿಕೆರೆ ಜಗದೀಶ್, ಬಿ.ಎಚ್.ಮಂಜುನಾಥ್, ಶಿವಕುಮಾರ್ ಮಾತನಾಡಿದರು.
ಈ ವೇಳೆ ಪೌರಾಯುಕ್ತ ಎ.ವಾಸಿಂ, ರೈತ ಮುಖಂಡ ಕೆ.ಸಿ.ಹೊರಕೇರಪ್ಪ, ಏಕಾಂತಪ್ಪ, ಹಾರ್ಡ್‌ವೇರ್ ಶಿವಣ್ಣ, ಜಯಕುಮಾರ್, ಎಚ್.ಆರ್.ತಿಮ್ಮಯ್ಯ, ಶಂಕರಮೂರ್ತಿ, ಮಮತಾ ಕೃಷ್ಣಮೂರ್ತಿ, ಜಲ್ದಪ್ಪ, ಮಾನಸ ಮಂಜುನಾಥ್, ಕುಸುಮ, ನಿತಿನ್, ಪಿ.ಎಲ್.ಶಿವಣ್ಣ, ರಂಗನಾಥ್, ಡಾ.ಪ್ರಕಾಶ್, ರವಿಚಂದ್ರಗೌಡ, ಪ್ರಶಾಂತ್ ಮುಂತಾದವರು ಹಾಜರಿದ್ದರು.ಕೆಂಪೇಗೌಡರ ಆದರ್ಶಗಳ ಪಾಲನೆ ನಮ್ಮೆಲ್ಲರ ಕರ್ತವ್ಯ
ಕೆಪಿಸಿಸಿ ಉಪಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ಸುಮಾರು ಐನೂರು ವರ್ಷಗಳ ಹಿಂದೆಯೇ ಎಲ್ಲಾ ವರ್ಗಗಳ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರು ಕಟ್ಟಿದ ಕೆಂಪೇಗೌಡರು ಆದರ್ಶಪ್ರಾಯರು. ಐದು ಶತಮಾನದ ಹಿಂದೆಯೇ ಸಾವಿರಾರು ಕೆರೆಗಳನ್ನು ನಿರ್ಮಿಸಿ ನೀರಿನ ಮಹತ್ವ ಸಾರಿದ್ದರು. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಆಗಿನ ಕಾಲದಲ್ಲಿಯೇ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಪೇಟೆಗಳನ್ನು ನಿರ್ಮಿಸಿದ್ದರು. ಅವರ ಆದರ್ಶಗಳ ಪಾಲನೆ ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದರು.