ವಿಜೃಂಭಣೆಯ ಶಾಲಾ ಪ್ರಾರಂಭೋತ್ಸವ

KannadaprabhaNewsNetwork | Published : Jun 1, 2024 12:46 AM

ಸಾರಾಂಶ

ಪ್ರಾರಂಭೋತ್ಸದ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಲೂನು, ತಳಿರು- ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಯ ಮುಂಭಾಗದಲ್ಲಿ ರಂಗೋಲಿಯನ್ನು ಹಾಕಿದ್ದರು. ಮಕ್ಕಳು ಆಗಮಿಸುತ್ತಿದ್ದಂತೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.

ಕಾರವಾರ: ಕಾರವಾರ ಶೈಕ್ಷಣಿಕ ಜಿಲ್ಲೆಯ ೫ ತಾಲೂಕಿನಲ್ಲಿ ಶುಕ್ರವಾರ ಪ್ರಾಥಮಿಕ, ಪ್ರೌಢಶಾಲೆಗಳ ಪ್ರಾರಂಭೋತ್ಸವ ವಿಜೃಂಭಣೆಯಿಂದ ನಡೆಯಿತು. ಶಿಕ್ಷಕರು, ಎಸ್‌ಡಿಎಂಸಿಯವರು ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಪ್ರಾರಂಭೋತ್ಸದ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಲೂನು, ತಳಿರು- ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಯ ಮುಂಭಾಗದಲ್ಲಿ ರಂಗೋಲಿಯನ್ನು ಹಾಕಿದ್ದರು. ಮಕ್ಕಳು ಆಗಮಿಸುತ್ತಿದ್ದಂತೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು. ಹಳೆ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಬಂದಿದ್ದರೆ, ಹೊಸದಾಗಿ ಸೇರ್ಪಡೆಯಾಗುವವರು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಆಗಮಿಸಿದ್ದರು.

ಸರ್ಕಾರದಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುವ ಸಮವಸ್ತ್ರ ಹಾಗೂ ಪುಸ್ತಕವನ್ನು ಎಲ್ಲ ಶಾಲೆಗಳಿಗೂ ಇಲಾಖೆ ಮೂಲಕ ವಿತರಣೆಯಾಗಿದ್ದು, ಪ್ರಾರಂಭೋತ್ಸವದಂದು ಶಿಕ್ಷಕರು ಮಕ್ಕಳಿಗೆ ಹಂಚಿಕೆ ಮಾಡಿದರು.

ಮಧ್ಯಾಹ್ನ ಬಿಸಿಯೂಟದೊಂದಿಗೆ ಸಿಹಿ ಖಾದ್ಯವನ್ನು ಮಾಡಿ ವಿದ್ಯಾರ್ಥಿಗಳಿಗೆ ಉಣಬಡಿಸಲಾಯಿತು. ಎರಡು ತಿಂಗಳಿನಿಂದ ದೂರವಿದ್ದ ಸ್ನೇಹಿತರೊಂದಿಗೆ ಶಾಲೆಯಲ್ಲಿ ಸೇರಿ ಸಂಭ್ರಮಿಸಿದರು.

ಹೂವು, ಪುಸ್ತಕ ನೀಡಿ ಸ್ವಾಗತ: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ೨೦೨೪- ೨೫ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಒಂದನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗಕ್ಕೆ ದಾಖಲಾದ ೩೦ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಪುಸ್ತಕ, ಸಮವಸ್ತ್ರವನ್ನು ನೀಡಿ ಶಾಲೆಗೆ ಸ್ವಾಗತಿಸಲಾಯಿತು. ಸಿಹಿ ಹಾಗೂ ಚಾಕ್ಲೇಟ್‌ಗಳನ್ನು ವಿತರಿಸಲಾಯಿತು. ಕಾರವಾರ ಶಿಕ್ಷಣ ಸಂಯೋಜಕಿ ಸುಜಾತ ಜಾವಕಾರ್, ಕಾರವಾರ ಸಿಆರ್‌ಪಿ ಪ್ರಶಾಂತ ಸಾವಂತ್ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ದೊರಕುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಉರ್ದು ಸಿಆರ್‌ಪಿ ನಾಸಿರ್ ಖಾನ್, ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ ನಾಯಕ, ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ ಪರವಾರ್, ಮರಾಠಿ ಶಾಲೆಯ ಮುಖ್ಯ ಶಿಕ್ಷಕಿ ತಾರಕಾ ಮಡಕರಣಿ, ಶಿಕ್ಷಕ ಅರುಣ್ ಬಲೆಗಾರ, ಶ್ಯಾಮಸುಂದರ್ ಗೋಕರ್ಣ, ಸತೀಶ ನಾಯ್ಕ, ಸುನೀಲ ನಾಯ್ಕ, ಶಿಕ್ಷಕಿ ವಾಣಿ ಅಕ್ಕಸಾಲಿ ಇದ್ದರು.

Share this article