ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮೂಲ ಕಾಂಗ್ರೆಸ್ಸಿಗನಾದ ನನ್ನ ಮತ್ತು ಮೂಲ ಬಿಜೆಪಿಯವರಾದ ಕೆ.ರಘುಪತಿ ಭಟ್ ಅವರ ನಡುವೆ ನೇರ ಸ್ಪರ್ಧೆ ನಡೆಯಲಿದೆ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಹೇಳಿದರು.ಶುಕ್ರವಾರ ಪಟ್ಟಣದಲ್ಲಿ ಪದವೀಧರರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದ ಸಂದರ್ಭ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. 33 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದ್ದೇನೆ. 2012 ರಲ್ಲಿ ಮತ್ತು 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ಅಲ್ಪಮತಗಳ ಅಂತರದಲ್ಲಿ ಪರಾಭವಗೊಂಡಿದ್ದೇನೆ. ಆದರೆ, ಈಗ ನಾನು ಪಕ್ಷಾಂತರಿಯೊಬ್ಬರಿಂದ ಕಾಂಗ್ರೆಸ್ ಟಿಕೆಟ್ ವಂಚಿತನಾಗಿದ್ದೇನೆ. ಆದರೆ ಪದವೀಧರರಿಗೆ ಮತ್ತು ಕಾರ್ಯಕರ್ತರಿಗೆ ಹತ್ತಿರದಲ್ಲಿದ್ದೇನೆ ಎಂದು ದಿನೇಶ್ ಹೇಳಿದರು.
ಕಳೆದ ಬಾರಿ ಬಿಜೆಪಿಯಿಂದ ವಿಜೇತರಾಗಿದ್ದ ಆಯನೂರು ಮಂಜುನಾಥ್ ಅವರು ಇನ್ನೂ ಒಂದು ವರ್ಷ ಇರುವಾಗಲೇ ಪರಿಷತ್ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು. ಆಗ ಮತ ಹಾಕಿದ ನಿಮ್ಮನ್ನು ರಾಜಿನಾಮೆ ಕೊಡುವಾಗ ಕೇಳಿದರೇ ಎಂದು ಮತದಾರರನ್ನು ಪ್ರಶ್ನಿಸಿದರು.ಆಯನೂರು ಮಂಜುನಾಥ ನಾಲ್ಕನೇ ಸ್ಥಾನಕ್ಕೆ: ನಾಲ್ಕು ಮನೆಗಳನ್ನು ನೋಡಿದ, ನಾಲ್ಕು ಪಕ್ಷಗಳನ್ನು ನೋಡಿದ ಪಕ್ಷಾಂತರಿ ಆಯನೂರು ಮಂಜುನಾಥ್ ಅವರು ಈ ಬಾರಿ ಪರಿಷತ್ತು ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಹೋಗುವುದು ಖಚಿತ. ನಿಮ್ಮ ಮತದ ಮೌಲ್ಯ ಹೆಚ್ಚಾಗಬೇಕಾದರೆ ಕೆಲಸ ಕಾರ್ಯ ಮಾಡಿಕೊಡುವವರಿಗೆ ಮತಹಾಕಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ರಾಜಕೀಯವಾಗಿ ಇನ್ನೂ ತರಬೇತಿ ಹೊಂದಬೇಕಾಗಿದೆ. ಕೇವಲ ಒಂದು ವರ್ಷದ ಕೆಳಗೆ ಬಿಜೆಪಿ ಸೇರಿದವರು. ಕೋವಿಡ್ ಸಂದರ್ಭ ಒಂದೇ ಆಸ್ಪತ್ರೆ ಹೊಂದಿದ್ದ ಅವರು, ಕೇವಲ ನಾಲ್ಕು ವರ್ಷಗಳಲ್ಲಿ ಮೂರು ಆಸ್ಪತ್ರೆಗಳನ್ನು ಹೇಗೆ ತೆರೆಯಲು ಸಾಧ್ಯವಾಯಿತು ಎಂದು ಪ್ರಶ್ನಿಸಿದರು.ಡಿ.ಕೆ. ಶಿವಕುಮಾರ್ ಕೈ ಕೊಟ್ಟರು:
ಕಳೆದೊಂದು ವರ್ಷದಿಂದ ಡಿ.ಕೆ. ಶಿವಕುಮಾರ್ ಅವರು, ನಾನು ಭೇಟಿ ಮಾಡಿದಾಗಲೆಲ್ಲಾ ನನ್ನ ಬೆನ್ನು ತಟ್ಟಿ ನಿನಗೆ ಟಿಕೆಟ್, ಕೆಲಸ ಮಾಡು ಹೋಗು ಎಂದು ಹೇಳುತ್ತಿದ್ದರು. ಆದರೀಗ ಕೈ ಕೊಟ್ಟಿದ್ದಾರೆ. ಪಕ್ಷಾಂತರಿಗೆ ಟಿಕೆಟ್ ಕೊಡುವ ಬದಲು ಪಕ್ಷಕ್ಕಾಗಿ ದುಡಿದವರಿಗೆ ಕೊಟ್ಟಿದ್ದರೆ ನಾನು ಚುನಾವಣೆ ಮಾಡುತ್ತಿರಲಿಲ್ಲ ಎಂದರು.ಮೊದಲ ಪ್ರಾಶಸ್ತ್ಯ ಮತ ನೀಡಿ:
ಈ ಹಿಂದೆ ಬಿಜೆಪಿಯಲ್ಲಿದ್ದು, ಹೊನ್ನಾಳಿಗೆ ಚುನಾವಣೆ ಪ್ರಚಾರಕ್ಕೆ ಬಂದಾಗ ಡಿ.ಜಿ. ಶಾಂತನಗೌಡ ಬುಡವನ್ನು ಹೇಗೆ ಕಟ್ ಮಾಡುತ್ತೇನೆ ನೋಡಿ ಎಂದು ಹೇಳಿದ್ದರು. ನಿಮ್ಮ ಕ್ಷೇತ್ರದ ಶಾಸಕರ ಬುಡ ಕಟ್ ಮಾಡಲು ಹೊರಟ ವ್ಯಕ್ತಿಯನ್ನು ನೀವು ಬೆಂಬಲಿಸುತ್ತೀರಾ? ನನ್ನ ಪೂರ್ವಜರು ಹೊನ್ನಾಳಿ ತಾಲೂಕಿನ ಬಸವನಹಳ್ಳಿಯವರು. ನನ್ನ ತಾಯಿ ಚನ್ನಗಿರಿ ತಾಲೂಕು ದಾಗಿನಕಟ್ಟೆಯವರು. ಹೀಗಾಗಿ ನನಗೆ ಈ ಭಾಗದಲ್ಲಿ ಹೆಚ್ಚಿನ ಮತಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಜೂನ್ 3 ರಂದು ನಡೆಯುವ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪ್ರೊ. ಸುಧಾಕರ್, ಮುಖಂಡರಾದ ಅಭಿಷೇಕ್, ಮೋಹನ್ ಇತರರು ಉಪಸ್ಥಿತರಿದ್ದರು.
- - - -31ಎಚ್.ಎಲ್.ಐ2:ಹೊನ್ನಾಳಿ ಪಟ್ಟಣದಲ್ಲಿ ಶುಕ್ರವಾರ ನೈಋತ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ಮತಯಾಚಿಸಿದರು.