ನಾಳೆ ಹಸಿರೋತ್ಸವ, ಸಹಜ ಕೃಷಿ, ಸಹಜ ಜೀವನ ಉತ್ಸವ

KannadaprabhaNewsNetwork | Published : Jun 1, 2024 12:46 AM

ಸಾರಾಂಶ

ಹರಿಹರ ತಾಲೂಕು ಶ್ರೀನಿವಾಸ ನಗರದ ಐಕಾಂತಿಕ ಬುಡಕಟ್ಟು ಸಮುದಾಯದಲ್ಲಿ ಜೂ.2ರಂದು ಹಸಿರೋತ್ಸವ ಸಹಜ ಕೃಷಿ ಮತ್ತು ಸಹಜ ಜೀವನ ಕುರಿತ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಕಾಂತಿಕಾ ಸಂಸ್ಥೆಯ ರಾಘವ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬೀಜಮಾತೆಯರಾದ ಮುದೇನೂರು ಸುನೀತಾ ಶಂಕರಗೌಡ, ಎರೇಹಳ್ಳಿ ಪರಿಮಳ ಹನುಮಂತಪ್ಪ ಭಾಗಿ: ರಾಘ‍ವ- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಹರಿಹರ ತಾಲೂಕು ಶ್ರೀನಿವಾಸ ನಗರದ ಐಕಾಂತಿಕ ಬುಡಕಟ್ಟು ಸಮುದಾಯದಲ್ಲಿ ಜೂ.2ರಂದು ಹಸಿರೋತ್ಸವ ಸಹಜ ಕೃಷಿ ಮತ್ತು ಸಹಜ ಜೀವನ ಕುರಿತ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಕಾಂತಿಕಾ ಸಂಸ್ಥೆಯ ರಾಘವ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಸಂಜೆ 5.30 ಗಂಟೆವರೆಗೆ ನಡೆಯುವ ಉತ್ಸವದಲ್ಲಿ ರಾಣೇಬೆನ್ನೂರು ತಾಲೂಕು ಮುದೇನೂರು ಗ್ರಾಮದ ಬೀಜಮಾತೆ ಸುನೀತಾ ಶಂಕರಗೌಡ ದಂಪತಿ, ಹೊನ್ನಾಳಿ ತಾಲೂಕು ಎರೇಹಳ್ಳಿ ಗ್ರಾಮದ ಪರಿಮಳ ಹನುಮಂತಪ್ಪ ದಂಪತಿ ಭಾಗವಹಿಸುವರು ಎಂದರು.

ಉತ್ಸವದಲ್ಲಿ ವಿವಿಧ ತರಕಾರಿ ತಳಿಗಳು, ದೇಶಿ ತಳಿಗಳ ಅಕ್ಕಿ, ಸಿರಿಧಾನ್ಯಗಳು, ಬೇಳೆ ಕಾಳುಗಳ ಮಾರಾಟವೂ ನಡೆಯಲಿದೆ. ಬೀಜ ವಿನಿಮಯ ಕಾರ್ಯಕ್ರಮವೂ ಇದಾಗಿದೆ. ಆಸಕ್ತರು ಬೀಜ ಮತ್ತು ಗಿಡಗಳನ್ನು ವಿನಿಮಯಕ್ಕಾಗಿ ಇಲ್ಲಿಗೆ ತರಲು ಅವಕಾಶವಿದೆ. ಕೈತೋಟ ಪ್ರಿಯರು ಮತ್ತು ರೈತರು ತಮಗೆ ಬೇಕಾದ ಅಗತ್ಯ ಬೀಜಗಳ ತಳಿಗಳನ್ನೂ ಇಲ್ಲಿ ಖರೀದಿಸಬಹುದು ಎಂದು ಹೇಳಿದರು.

ಪರಿಸರದ ನೀತಿಕಥೆ, ಜಿಲ್ಲೆಯ ಆರೋಗ್ಯ ಉದ್ಯಮ, ನೈಸರ್ಗಿಕ ಕಟ್ಟಡಗಳು, ವಿಷಮುಕ್ತ ಅಡುಗೆ ಪಾತ್ರೆಗಳು, ಪಾರಂಪರಿಕ ಬೀಜಗಳು, ನಮ್ಮ ತರಕಾರಿ ನಮ್ಮ ತಾರಸಿಯಿಂದ, ಕೈಗಾರೀಕೃತ ಹಾಲು, ಪ್ಲಾಸ್ಟಿಕ್ ಭೂತ, ಪ್ಯಾಕೇಜ್ ಆಹಾರ ಪದಾರ್ಥಗಳಲ್ಲಿ ಕೆಮಿಕಲ್ ಪ್ರಿಸರ್ವೇಟಿವ್ಸ್, ಡಿಜಿಟಲ್ ಯೋಗಕ್ಷೇಮ, ಬರಿಗಾಲಿನ ನಡಿಗೆ, ಸ್ಯಾನಿಟರಿ ಪ್ಯಾಡ್‌ಗಳಿಗೆ ಸುಸ್ಥಿರ ಪರ್ಯಾಯಗಳು, ಕೈಗಾರಿಕೃತ ಮೊಟ್ಟೆ ಮತ್ತು ಮಾಂಸ, ಸಂಸ್ಕರಿಸಿದ ಸಕ್ಕರೆ, ಪರ್ಯಾಯ ಚಿಕಿತ್ಸಾ ಪದ್ಧತಿ, ಸಂಸ್ಕರಿಸಿದ ಉಪ್ಪು, ನೈಸರ್ಗಿಕ ಉಡುಪು, ಸ್ವಶಿಕ್ಷಣ (ಮನೆಯಲ್ಲೇ ಶಿಕ್ಷಣ) ಹೀಗೆ ಸಹಜ ಜೀವನದ ವಿಷಯಗಳ ಬಗ್ಗೆ ತಜ್ಞರಿಂದ ಉಪನ್ಯಾಸ ಇರಲಿದೆ ಎಂದರು.

ಹಲವು ಹಣ್ಣಿನ ಮತ್ತು ಔಷಧೀಯ ಸಸ್ಯ ಮಾರಾಟಕ್ಕೆ ಲಭ್ಯವಿರುತ್ತವೆ. ಮಹಿಳಾ ಸಂಘಗಳು ಮೌಲ್ಯವರ್ಧಿತ ಪದಾರ್ಥ ಮಾರಾಟಕ್ಕೆ ತರಲಿವೆ. ರಾಜ್ಯದ ಜನತೆಗೆ ದೇಸೀ ಸೊಗಡಿನ ಆಹಾರಗಳನ್ನು ಪರಿಚಯಿಸಲು ಮಹಿಳಾ ಸಂಘದ ಸದಸ್ಯರು ಸಾಂಪ್ರದಾಯಿಕ ಅಡುಗೆಗಳ ಜೊತೆ ಬರಲಿದ್ದಾರೆ. ವಿವಿಧ ಸಾವಯವ ಮಳಿಗೆ, ರೈತ ಉತ್ಪಾದಕರ ಗುಂಪು ಬೇಳೆ ಕಾಳು, ಹಣ್ಣುಗಳನ್ನು ಮಾರಾಟಕ್ಕೆ ತರಲಿವೆ. ಅಪರೂಪದ ಬೀಜ, ಹಣ್ಣು, ಕಾಯಿ ಸೇರಿದಂತೆ ಕೃಷಿ ವೈವಿಧ್ಯದ ಉತ್ಪನ್ನ ಪ್ರದರ್ಶನಕ್ಕೆ ಬರಲಿವೆ. ಬೆಂಗಳೂರಲ್ಲಿ ವೈವಿಧ್ಯದ ತಾರಸಿ ಕೈತೋಟ ಮಾಡಿಕೊಂಡು, ತಮ್ಮ ಮನೆ ಬಳಕೆಗೆ ಬೇಕಾದ ಶೇ.80ರಷ್ಟು ತರಕಾರಿಗಳನ್ನು ಪಡೆಯುತ್ತಿರುವ ಶೈಲಜಾ ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

ಕುಂಬಾರಿಕೆ ಗಾಲಿ ಮೇಲೆ ಮಣ್ಣಿನ ಮಡಿಕೆ ಮಾಡುವ ಸಂತೋಷ ಅನುಭವಿಸಲು ಅವಕಾಶವಿದೆ. ಸಹಜ ಕೃಷಿ, ಸಹಜ ಜೀವನಕ್ಕೆ ಸಂಬಂಧಿಸಿದ ಪುಸ್ತಕ ಮಾರಾಟಕ್ಕೆ ಇರುತ್ತವೆ. ವಿಷಮುಕ್ತ ಕೃಷಿ ಉತ್ಪನ್ನ ಹಾಗೂ ಆರೋಗ್ಯಕರ ಆಹಾರ ಉತ್ಪನ್ನ ಕಾರ್ಯಕ್ರಮದಲ್ಲಿ ಸಿಗಲಿವೆ. ಪಾರಂಪರಿಕ ಬೀಜ ಸಂರಕ್ಷಕರು, ಸಹಜ-ಸಾವಯವ ಕೃಷಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 97431- 40939, 88679- 02370 ಇಲ್ಲಿಗೆ ಸಂಪರ್ಕಿಸಲು ರಾಘವ ಮನವಿ ಮಾಡಿದರು.

ನೈಸರ್ಗಿಕ ಕೃಷಿಕರಾದ ಸುಜಿತಕುಮಾರ ಇಟ್ಟಿಗಿ, ಹನುಮಂತಪ್ಪ, ಪಾಂಡುರಂಗ ಆಚಾರ್‌, ಅಭಿಷೇಕ್‌ ಇತರರು ಇದ್ದರು.

- - -

ಬಾಕ್ಸ್‌ * ಹತ್ತಿ ಬಟ್ಟೆ, ಹಣ್ಣು ತರಕಾರಿ, ಬತ್ತದ ತಳಿ ಪ್ರದರ್ಶನ ಸುಸ್ಥಿರ ಜೀವನಶೈಲಿಯ ಉತ್ಪನ್ನಗಳಾದ ಶೇ.100ರಷ್ಟು ನೈಸರ್ಗಿಕ ಬಣ್ಣದ ಹತ್ತಿಯ ಸಿದ್ಧ ಉಡುಪುಗಳು, ಹಣ್ಣು, ತರಕಾರಿಗಳು, ವಿವಿಧ ಬತ್ತದ ತಳಿಗಳ ಪ್ರದರ್ಶನವಿರುತ್ತದೆ. ನೈಸರ್ಗಿಕ ಸ್ವಚ್ಛತಾ ಸಾಮಗ್ರಿಗಳು, ಮಣ್ಣಿನ ಮಡಿಕೆಗಳು, ಮಕ್ಕಳಿಗೆ ಮಣ್ಣಿನ ಆಟಿಕೆಗಳು ಸಹ ಉತ್ಸವಕ್ಕೆ ಬರುತ್ತಿವೆ. ಆರೋಗ್ಯಕರ ಆಹಾರ ಉತ್ಪನ್ನಗಳಾದ ಕಾಳು ಮೆಣಸಿನ ಬೆಲ್ಲದ ಪಾನಕ, ಬೆಲ್ಲದ ಕೊಬ್ಬರಿ, ಕುಟ್ಟುಂಡಿ, ತೆಂಗಿನ ಗಿಣ್ಣ, ಜವೇಗೋಧಿ ಬೆಲ್ಲದ ಕೇಕ್‌, ಕುಕ್ಕೀಸ್‌, ಕೆಂಪು ಅಕ್ಕಿಯ ಚೆಕ್ಕುಲಿ ಉತ್ಪನ್ನಗಳು ಬಾಯಿ ಚಪ್ಪರಿಸಲು ಸಿಗಲಿವೆ ಎಂದು ಐಕಾಂತಿಕಾ ಸಂಸ್ಥೆಯ ರಾಘವ ವಿವರಿಸಿದರು.

- - - -31ಕೆಡಿವಿಜಿ3:

ದಾವಣಗೆರೆಯಲ್ಲಿ ಶುಕ್ರವಾರ ಐಕಾಂತಿಕಾ ಸಂಸ್ಥೆಯ ರಾಘವ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article