ವಿ.ಎಂ. ನಾಗಭೂಷಣ
ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ೧೦೦೩ ಶಿಕ್ಷಕರ ಹುದ್ದೆಗಳಲ್ಲಿ ೫೬೧ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ೪೪೨ ಹುದ್ದೆಗಳು ಖಾಲಿ ಇವೆ. ಪ್ರೌಢ ಶಾಲೆಗಳಲ್ಲಿ ಮಂಜೂರಾದ ೨೨೫ ಹುದ್ದೆಗಳಲ್ಲಿ ೧೩೭ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ೮೮ ಹುದ್ದೆಗಳು ಖಾಲಿ ಇವೆ.
ತಾಲೂಕಿನಲ್ಲಿ ೩೨೩ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ೬೬ ಪ್ರೌಢ ಶಾಲಾ ಶಿಕ್ಷಕರು ಸೇರಿ ಒಟ್ಟು ೩೮೯ ಅತಿಥಿ ಶಿಕ್ಷಕರ ನೇಮಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ.ವಿವಿಧ ಯೋಜನೆಗಳ ಅಡಿಯಲ್ಲಿ ತಾಲೂಕಿನಲ್ಲಿಯ ೭೧ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ನಡೆದಿದೆ. ಹೊಸದಾಗಿ ೯೦ ಕೊಠಡಿಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇವುಗಳಲ್ಲಿ ೨೭ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ೩೨ ಕೊಠಡಿಗಳ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ಇಲಾಖೆಗೆ ಹಸ್ತಾಂತರಗೊಳ್ಳಬೇಕಿದೆ. ಇನ್ನುಳಿದ ಕೊಠಡಿಗಳ ನಿರ್ಮಾಣದ ಟೆಂಡರ್ ಪ್ರಕ್ರಿಯೆ ನಡೆದಿದೆ.
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ, ಆಂಗ್ಲ ಭಾಷಾ ತರಗತಿಗಳನ್ನು ಆರಂಭಿಸಿರುವುದಕ್ಕೆ ಕೆಲ ಕಡೆಗಳಲ್ಲಿ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕೆಲವು ಕಡೆಗಳಲ್ಲಿ ನಿಧಾನವಾಗಿ ವೇಗ ಪಡೆದುಕೊಳ್ಳುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ, ದ್ವಿಭಾಷಾ ತರಗತಿಗಳನ್ನು ಆರಂಭಿಸಿರುವುದು ಖಾಸಗಿ ಶಾಲೆಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಶಿಕ್ಷಕರ ಕೊರತೆ, ಕೊಠಡಿಗಳ ದುರಸ್ತಿಯ ನಡುವೆಯೂ ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ. ಹೊಸ ಶೈಕ್ಷಣಿಕ ವರ್ಷ ಫಲಪ್ರದವಾಗಲಿ. ಶಾಲೆಗಳಲ್ಲಿ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಲಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂಬುದು ಎಲ್ಲರ ಸದಾಶಯ.ತಾಲೂಕಿನಲ್ಲಿ ೩೮೯ ಅತಿಥಿ ಶಿಕ್ಷಕರ ನೇಮಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಕಳಿಸಿಕೊಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಆರಂಭಿಸಲಾಗಿರುವ ಎಲ್‌ಕೆಜಿ, ಯುಕೆಜಿ, ದ್ವಿಭಾಷಾ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರವೇಶ ಪ್ರಕ್ರಿಯೆ ಚುರುಕಾಗಿ ನಡೆದಿದೆ ಎನ್ನುತ್ತಾರೆ ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ.