ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಆವರಣದಿಂದ ಕನ್ನಡಾಂಬೆಯ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತದ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಗೊಂಬೆ ಕುಣಿತ ಹಾಗೂ ವಿವಿಧ ಇಲಾಖೆಯವರು ತಯಾರಿಸಿದ ಸ್ತಬ್ಧಚಿತ್ರಗಳು ಎಲ್ಲರನ್ನು ಆಕರ್ಷಿಸಿದವು. ಮೆರವಣಿಗೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ ಬಾಗಲಕೋಟೆಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಯಾರಿಸಿದ ಸರ್ವಧರ್ಮ ಐಕ್ಯತಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಯಾರಿಸಿದ ವ್ಯಸನಮುಕ್ತ ದಿನಾಚರಣೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಸ್ತಬ್ಧಚಿತ್ರಗಳು ಪ್ರಥಮ ಸ್ಥಾನ ಪಡೆದುಕೊಂಡವು.ರೇಷ್ಮೆ ಕೃಷಿ ಮತ್ತು ವಸ್ತು ಪ್ರದರ್ಶನ ಕುರಿತಾದ ರೇಷ್ಮೆ ಇಲಾಖೆಯ ಸ್ತಬ್ಧಚಿತ್ರ ದ್ವಿತೀಯ ಸ್ಥಾನ ಪಡೆದುಕೊಂಡಿತು. ನಗರ ಸ್ವಚ್ಛವಾಗಿಡಲು ಹಸಿ ಹಾಗೂ ಒಣ ಕಸ ಬೇರ್ಪಡಿಸುವ ವಿಧಾನದ ಕುರಿತಾದ ಬಾಗಲಕೋಟೆ ನಗರಸಭೆಯ ಸ್ತಬ್ಧಚಿತ್ರ ತೃತೀಯ ಸ್ಥಾನ ಪಡೆದುಕೊಂಡವು. ಪ್ರಶಸ್ತಿ ಪಡೆದುಕೊಂಡ ಸ್ತಬ್ಧಚಿತ್ರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಪ್ರಶಸ್ತಿ ವಿತರಣೆ ಮಾಡಿದರು.