ಕನ್ನಡಪ್ರಭ ವಾರ್ತೆ ಮೇಲುಕೋಟೆ
ವರ್ಷಕ್ಕೆ ಒಮ್ಮೆಮಾತ್ರ ವೈರಮುಡಿ ಬ್ರಹ್ಮೋತ್ಸವ ವೇಳೆ ಧಾರಾಮಂಟಪದಲ್ಲಿ ನಡೆಯುವ ಕಲ್ಯಾಣೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ಆಂಧ್ರಪ್ರದೇಶ, ತಮಿಳುನಾಡಿನಿಂದ ನೂರಾರು ಭಕ್ತರು ಸಹ ಭಾಗವಹಿಸಿದ್ದರು. ಧಾರಾ ಮಹೋತ್ಸವದ ಅಂಗವಾಗಿ ಇಡೀ ಧಾರಾಮಂಟಪವನ್ನು ಆಗಮ ಪ್ರವೀಣ ವಿದ್ವಾನ್ ರಾಮಪ್ರಿಯ ನೇತೃತ್ವದಲ್ಲಿ ಕೈಂಕರ್ಯಪರರೆಲ್ಲೂ ಸೇರಿ ಆಕರ್ಷಕವಾಗಿ ಪುಷ್ಪಾಲಂಕಾರ ಮಾಡಿ ತಳಿರುತೋರಣಗಳಿಂದ ಸಿಂಗಾರ ಮಾಡಿದ್ದರು. ಕಲ್ಯಾಣಿ ಸಮುಚ್ಚಯಕ್ಕೆ ದೀಪಾಲಂಕಾರದಿಂದ ಸಿಂಗಾರ ಮಾಡಲಾಗಿತ್ತು.
ಕಲ್ಯಾಣ ನಾಯಕಿ ಅಮ್ಮನವರಿಗೆ ಸಂಜೆ 5.30ರ ವೇಳೆಗೆ ಕಲ್ಯಾಣಿಗೆ ಉತ್ಸವ ನೆರವೇರಿಸಲಾಯಿತು. ಸಂಜೆ 6 ಗಂಟೆ ದೇವ ಸೇನಾಧಿಪತಿ ವಿಶ್ವಕ್ಸೇನರ ಉತ್ಸವ ನೆರವೇರಿಸಿ ಕಲ್ಯಾಣೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಲಾಯಿತು. ನಂತರ ನವ ವಧುವಿನಂತೆ ಬಂಗಾರದ ಪ್ರಭಾವಳಿಯೊಂದಿಗೆ ಸಿಂಗಾರಗೊಂಡ ಶ್ರೀಚೆಲುವನಾರಾಯಣಸ್ವಾಮಿ ಭವ್ಯ ಉತ್ಸವ 6.30ರ ವೇಳೆಗೆ ಧಾರಾಮಂಟಪಕ್ಕೆ ತಲುಪಿದ ನಂತರ ಅಲ್ಲಿ ಕಲ್ಯಾಣನಾಯಕಿ ಅಮ್ಮನವರು ಹಾಗೂ ಚೆಲುವನಾರಾಯಣಸ್ವಾಮಿಗೆ ಸಮನ್ಮಾಲೆ ನೆರವೇರಿಸಲಾಯಿತು. ಲಾಜಹೋಮ ಹಾಗೂ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಳಜಿಯಿಂದ ಕಲ್ಯಾಣೋತ್ಸವಕ್ಕೆ ಈ ಬಾರಿ ಉತ್ತಮ ವ್ಯವಸ್ಥೆ ಮಾಡಲಾಗಿತ್ತು. ಮೇಲುಕೋಟೆ ಎಲ್ಲಾ ಪ್ರಮುಖ ಬೀದಿಗಳಿಗೆ ವಿಶೇಷ ದೀಪಾಲಂಕಾರ ಹಾಗೂ ಜಕ್ಕನಹಳ್ಳಿಯಿಂದ ಮೇಲುಕೋಟೆ ವರೆಗೆ ಸುಮಾರು 7 ಕಿಮೀ ಉದ್ದಕ್ಕೂ 50 ಅಡಿಅಂತರದಲ್ಲಿ ವಿದ್ಯುತ್ ದೀಪಗಳ ತೋರಣಗಳನ್ನು ಹಾಕಲಾಗಿತ್ತು.
ಕನ್ನಡಸಂಸ್ಕೃತಿ ಇಲಾಖೆ ಪ್ರಾಯೋಜಕತ್ವ ಹಾಗೂ ಮೇಲುಕೋಟೆಯ ಎಸ್.ಎನ್.ಐ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ 11ನೇ ವರ್ಷದ ‘ವೈರಮುಡಿ ಬ್ರಹ್ಮೋತ್ಸವ ನಾದೋಪಾಸನ ಸೇವೆಯಡಿ ಕಲ್ಯಾಣೋತ್ಸವದಂದು ವಿದ್ವಾನ್ ಎಂ.ಎನ್ ಆನಂದ್, ಎಂ.ಜಿ ಶ್ರೀಧರ, ನಾಗೇಶ್ ತಂಡ ಸುಶ್ರಾವ್ಯವಾಗಿ ನಾದಸ್ವರ ನುಡಿಸುವ ಮೂಲಕ ಸ್ವಾಮಿಯ ಉತ್ಸವಕ್ಕೆ ನಾದಮಾಧುರ್ಯದ ಮೆರಗು ಹೆಚ್ಚಿಸಿತ್ತು.
ರಾತ್ರಿ 10ಗಂಟೆವೇಳೆಗೆ ಕಲ್ಯಾಣೋತ್ಸವದ ಕಾರ್ಯಕ್ರಮಗಳು ಮುಕ್ತಾಯವಾದವು. ನಾದೋಪಾಸನ ಸೇವೆಯಡಿ 14 ದಿನಗಳ ಕಾಲ ಸ್ವಾಮಿ ಉತ್ಸವಗಳಿಗೆ ಸೌಮ್ಯ ಸಂತಾನಂ ಮತ್ತು ಯತಿರಾಜದಾಸರ್ ಗುರುಪೀಠದಿಂದ ನಾದಸ್ವರ ಸೇವಾ ಕೈಂಕರ್ಯ ನಡೆದರೆ 14 ದಿನಗಳ ಕಾಲ ಎಲ್ಲಾ ಉತ್ಸವಗಳಿಗೆ ಆಗಮಪ್ರವೀಣ ವಿದ್ವಾನ್ ರಾಮಪ್ರಿಯ ನೇತೃತ್ವದಲ್ಲಿ ಕೈಂಕರ್ಯಪರರೆಲ್ಲೂ ಸೇರಿ ಪುಷ್ಪಾಲಂಕಾರ ತೋಮಾಲೆ ಸೇವೆಯನ್ನು ಮಾಡುತ್ತಿದ್ದಾರೆ. ಇಂದು ಗರುಡ ಧ್ವಜಾರೋಹಣವೈರಮುಡಿ ಬ್ರಹ್ಮೋತ್ಸವದ ಮೊದಲನೇ ತಿರುನಾಳ್ ಅಂಗವಾಗಿ ಮಾ.25 ರಂದು ದೇವಾಲಯದಲ್ಲಿ ಗರುಡದ್ವಜಾರೋಹಣ ನೆರವೇರಲಿದೆ. ಜಾತ್ರಾಮಹೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲು ಗರಡುದೇವನನ್ನು ಸ್ಥಾನೀಕರು ಅರ್ಚಕರು ಗರುಡಸಾಮದೊಂದಿಗೆ ಆರಾಧಿಸುವ ಕೈಂಕರ್ಯ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ದ್ವಜಾರೋಹಣ ಹಾಗೂ ರಾತ್ರಿ ತಿರುಪ್ಪರೈ ನಂತರ ಹಂಸವಾಹನೋತ್ಸವ ನೆರವೇರಲಿದೆ.