ಕನ್ನಡಪ್ರಭ ವಾರ್ತೆ ಆಲಮಟ್ಟಿ
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತ್ಯೇಕವಾಗಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಚಂದ್ರಮ್ಮಾ ದೇವಸ್ಥಾನದಿಂದ ಹಲಗೆ ವಾದನದೊಂದಿಗೆ ಪ್ರತಿಭಟನೆ ಮೆರವಣಿಗೆ ಮೂಲಕ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಕಚೇರಿಗೆ ತೆರಳಿ ಕಚೇರಿಗೆ ಬೀಗ ಜಡಿದು, ಅರೆಬೆತ್ತಲೆಯಾಗಿ ಮಲಗಿ ಪ್ರತಿಭಟಿಸಿದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿದೆ. ನೀರು ಬರುತ್ತದೆ ಎಂಬ ನಂಬಿಕೆಯಲ್ಲಿ ರೈತರು ಬೆಳೆ ಬೆಳೆದಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಸಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳಿ ನೀರು ಬಿಡದಿರುವುದು ಸರಿಯಲ್ಲ. ತಕ್ಷಣ ಕಾಲುವೆಗೆ ನೀರು ಹರಿಸಬೇಕು, ಕೆರೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.ಅಧೀಕ್ಷಕ ಎಂಜಿನಿಯರ್ ಬಿ.ಎಸ್. ಪಾಟೀಲ ಮನವಿ ಸ್ವೀಕರಿಸಿ, ಜುಲೈ 14ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಡಿಸಿ, ಕೆಬಿಜೆಎನ್‌ಎಲ್ ಅಧಿಕಾರಿಗಳ ಸಭೆ ಇದೆ. ಅದರಲ್ಲಿ ನೀರು ಹರಿಸುವ ಬಗ್ಗೆ ತೀರ್ಮಾನವಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ರೈತರು ಹೋರಾಟ ಕೈಬಿಟ್ಟರು.
ಈ ವೇಳೆ ಗುರುಸಂಗಪ್ಪಗೌಡ ಹಂಡರಗಲ್ಲ, ಅಯ್ಯಪ್ಪ ಬಿದರಕುಂದಿ, ವೈ.ಎಲ್. ಬಿರಾದಾರ, ಶಿವಪ್ಪ ಬೇವಿನಮಟ್ಟಿ, ಲಕ್ಷ್ಮಣ ಚಳ್ಳಮರದ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೃಷ್ಣಾ ನದಿಯ ಹಿನ್ನೀರಿಗೆ ಇಳಿದು ಪ್ರತಿಭಟನೆ:
ಮತ್ತೊಂದೆಡೆ ರೈತ ಸಂಘ ಹಾಗೂ ಹಸಿರು ಸೇನೆಯವರು ರಾಮಲಿಂಗೇಶ್ವರ ದೇವಸ್ಥಾನ ಬಳಿಯಿಂದ ಹಲಗೆ ಬಾರಿಸುತ್ತ ಪ್ರತಿಭಟನೆ ಮೆರವಣಿಗೆ ಮೂಲಕ ಕೃಷ್ಣಾ ನದಿ ಹಿನ್ನೀರಿಗೆ ತೆರಳಿ ನೀರಿಗೆ ಇಳಿದು 2 ಗಂಟೆಗಳ ಕಾಲ ನೀರಿನಲ್ಲೇ ನಿಂತು ಪ್ರತಿಭಟಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಗಾಳಿ, ಚಳಿ, ನೀರಿನ ರಭಸದ ನಡುವೆಯೂ ಅವರು ನೀರಿನಲ್ಲೇ ನಿಂತು ಪ್ರತಿಭಟಿಸಿದರು. ತುಬಚಿ-ಬಬಲೇಶ್ವರ ನೀರು ಬಿಡಲಾಗಿದೆ. ಆದರೆ ಆಲಮಟ್ಟಿ ಕಾಲುವೆಗೆ ಮಾತ್ರ ನೀರಿಲ್ಲ. 3 ದಿನಗಳಲ್ಲಿ ನೀರು ಬಿಡದಿದ್ದರೆ ಅಮರಣ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರ ಮನವಿಗೆ ಮಣಿಯದ ರೈತರನ್ನು ನಿಡಗುಂದಿ ಸಿಪಿಐ ಶರಣಗೌಡ ಪಾಟೀಲ ಮನವೊಲಿಸಿ ಹೊರಗೆ ಕರೆ ತಂದರು.ಈ ವೇಳೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸೀತಪ್ಪ ಗಣಿ, ರವಿ ಕೋತಿನ, ವಿಠ್ಠಲ ಬಿರಾದಾರ, ಉಮೇಶ ವಾಲೀಕಾರ, ಸಿದ್ದು ಹಿರೇಮಠ ಸೇರಿದಂತೆ ಹಲವರು ಇದ್ದರು.