ಈರಣ್ಣ ಬುಡ್ಡಾಗೋಳ
ಕನ್ನಡಪ್ರಭ ವಾರ್ತೆ ರಾಮದುರ್ಗಬೆಳಗಾವಿ ಜಿಲ್ಲೆಯ ಕೆಲವೆಡೆ ಮುಂಗಾರು ಮಳೆ ಅಬ್ಬರಿಸುತ್ತಿದೆ. ಇದರಿಂದ ಹಳ್ಳ ನದಿಗಳು ತುಂಬಿಹರಿದು ನೆರೆಯ ಭೀತಿಯಲ್ಲಿದ್ದರೆ ರಾಮದುರ್ಗ ತಾಲೂಕಿನಲ್ಲಿ ಮಳೆರಾಯನ ಆಗಮನಕ್ಕೆ ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಮಳೆರಾಜ ಮುನಿಸಿಕೊಂಡಿದ್ದರಿಂದ ಭೀಕರ ಬರದ ಪರಿಸ್ಥಿತಿ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದೆ. ವಾಡಿಕೆ ಮಳೆ ಇರಲಿ ಅದರ ಹತ್ತಿರಕ್ಕೂ ಜೂನ್‌ನಲ್ಲಿ ಅದು ಸುಳಿದಿಲ್ಲ.ಕಳೆದ ಜೂನ್‌ನಲ್ಲಿ ಮಳೆರಾಯ ವಿಳಂಬವಾಗಿತ್ತು. ಆದರೆ ಕೆಲವು ರೈತರು ಹೆಸರು ಸೇರಿ ಬಿತ್ತನೆ ಮಾಡಿದ್ದಾರೆ. ಮತ್ತೆ ಕೆಲವರು ಮುಂದೆ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಒಣ ಮಣ್ಣಿನಲ್ಲಿ ಸಾಲ ಮಾಡಿ ಗೊಬ್ಬರ ತಂದು ಬೀಜ ಬಿತ್ತನೆಯನ್ನೂ ಮಾಡಿದ್ದಾರೆ. ಆದರೆ ರೈತರ ನಿರೀಕ್ಷೆ ಹುಸಿಯಾಗಿದೆ. ಕೇವಲ ಮೋಡಕವಿದ ವಾತಾವರಣ ಕಂಡುಬಂದಿದೆ. ಜೊತೆಗೆ ತುಂತುರು ಮಳೆಯಿಂದ ರೈತ ಜನಾಂಗ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇನ್ನೂ ಮಳೆಯಾಗದಿದ್ದರೆ ರೈತರ ಪಾಡೇನು ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲೇ ಸಾಲ ಮಾಡಿ ಬಿತ್ತಿದ್ದರಿಂದ ಅದರ ಪರಿಸ್ಥಿತಿ ಏನು ಎಂದು ಚಿಂತಿಸುವಂತಾಗಿದೆ. ಒಂದೆಡೇ ರೈತರು ಕೇವಲ ಕೃಷಿಯನ್ನು ನಂಬಿರುವುದು ಒಂದೆಡೆಯಾದರೆ, ಕೃಷಿ ಕಾರ್ಮಿಕರ ಪಾಡೇನು ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ.ಇನ್ನೊಂದಡೆ ಮಲಪ್ರಭಾ ನದಿಯ ನೀರನ್ನು ಅವಲಂಭಿಸಿ ಕೃಷಿ ಮಾಡುವ ಮತ್ತು ಪ್ರಮುಖ ವಾಣಿಜ್ಯ ಬೆಳೆ ಕಬ್ಬು ಬೆಳೆಯುವ ರೈತರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಮಲಪ್ರಭಾ ಜಲಾಶಯದಲ್ಲಿ ನೀರು ಸಂಗ್ರಹವಾದರೆ ಮಾತ್ರ ನದಿಗೆ ನೀರು ಬಿಡಲು ಸಾಧ್ಯ. ಆದರೆ, ನವಿಲುತೀರ್ಥ ಡ್ಯಾಂನಲ್ಲಿ ಸದ್ಯಕ್ಕಿರುವ ನೀರು ಹುಬ್ಬಳ್ಳಿ ಧಾರವಾಡ ಮತ್ತು ರಾಮದುರ್ಗ ನಗರ ಸೇರಿ ಕೆಲ ಗ್ರಾಮಗಳು ಸೇರಿದಂತೆ ಕುಡಿಯುವ ನೀರಿಗೆ ಮಾತ್ರ ಬಳಕೆಯಾಗಲು ಸಾಧ್ಯವಿದೆ. ಹೀಗಾಗಿ ಮಲಪ್ರಭಾ ನದಿ ಮತ್ತು ಜಲಾಶಯವನ್ನು ನಂಬಿದ ರೈತರು ಕೂಡ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಕಂಡುಬರುತ್ತಿವೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ರಾಮದುರ್ಗ ತಾಲೂಕು ಬರಪೀಡಿತ ತಾಲೂಕು ಆಗುವುದರಲ್ಲಿ ಸಂದೇಹವಿಲ್ಲ.ಉತ್ತಮ ಮಳೆಯಾಗುತ್ತದೆ ಎಂದು ನಂಬಿಕೊಂಡು ಈಗಾಗಲೇ ಬಿತ್ತನೆ ಮಾಡಿರುವ ರೈತರು ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ. ಜೀವನಕ್ಕೆ ಇರುವ ಒಂದೇ ಆಧಾರ ಕೃಷಿ. ಆದರೆ, ಅದುವೆ ಕೈ ಹಿಡಿಯಲಿಲ್ಲ ಎಂದಾದರ ರೈತರ ಆರ್ಥಿಕ ಶಕ್ತಿ ಮತ್ತಷ್ಟು ಕುಸಿಯುತ್ತದೆ ಎಂಬುವುದು ಅನ್ನದಾತರ ಅಳಲು.ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯೊಂದಿಗೆ ರೈತರು ಈಗಾಗಲೇ 24371 ಹೆಕ್ಟೇರ್ ಹೆಸರು, 8075 ಹೆಕ್ಟೇರ್ ಮೆಕ್ಕೆಜೋಳ, 590 ಸೂರ್ಯಕಾಂತಿ, 540 ಹತ್ತಿ, 115 ಶೇಂಗಾ, 1773 ಸಜ್ಜೆ, 1932 ತೊಗರಿ ಹೆಕ್ಟೇರ್ ಸೇರಿದಂತೆ ಒಟ್ಟು 51,894 ಹೆಕ್ಟೇರ್ ಪ್ರದೇಶ ಮುಂಗಾರು ಬೆಳೆ ಬಿತ್ತಿನೆಯಾಗಿದೆ.-ಶ್ರೀನಾಥ ಚಿಮ್ಮಲಗಿ,
ಸಹಾಯಕ ಕೃಷಿ ನಿರ್ದೇಶಕರು.ಉತ್ತಮ ಮುಂಗಾರು ಮಳೆಯ ಆಶಯದೊಂದಿಗೆ ತಾಲೂಕಿನಲ್ಲಿ ರೈತರು ಸಾಲ ಮಾಡಿ ಗೊಬ್ಬರ ಮತ್ತು ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ದು ಮುಂಗಾರು ಮಳೆ ವಿಫಲವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ರಾಮದುರ್ಗ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುವುದರ ಜೊತೆಗೆ ರೈತರ ಸಾಲ ಮನ್ನಾ ಮಾಡುವ ಮುಖಾಂತರ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.- ದುಂಡಪ್ಪ ದೇವರಡ್ಡಿ, ಮಾಜಿ ನಿರ್ದೇಶಕರು ಧನಲಕ್ಷ್ಮೀ ಶುಗರ್.