ಕನ್ನಡಪ್ರಭ ವಾರ್ತೆ ಬೀಳಗಿಪ್ರಸಕ್ತ ವರ್ಷದಲ್ಲಿ ಮುಂಗಾರಿ ಮಳೆ ಕೈ ಕೊಟ್ಟಿದೆ. ರೈತರ ಮೊಗದಲ್ಲಿ ಮಂದಹಾಸದ ಛಾಯೇ ಮೂಡದಿರುವುದರಿಂದ ರೈತ ಆಕಾಶದತ್ತ ಮುಖಮಾಡಿ ನಿಲ್ಲುವಂತಾಗಿದೆ. ಮಳೆ ಆಗದೇ ಇರುವ ವಾತಾವರಣ ನಿರ್ಮಾಣಗೊಂಡಿದೆ. ತಕ್ಷಣ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಪ್ರಸಕ್ತ ವರ್ಷದಲ್ಲಿ ಮುಂಗಾರಿ ಮಳೆ ಕೈ ಕೊಟ್ಟಿದೆ. ರೈತರ ಮೊಗದಲ್ಲಿ ಮಂದಹಾಸದ ಛಾಯೇ ಮೂಡದಿರುವುದರಿಂದ ರೈತ ಆಕಾಶದತ್ತ ಮುಖಮಾಡಿ ನಿಲ್ಲುವಂತಾಗಿದೆ. ಮಳೆ ಆಗದೇ ಇರುವ ವಾತಾವರಣ ನಿರ್ಮಾಣಗೊಂಡಿದೆ. ತಕ್ಷಣ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಆಗ್ರಹಿಸಿದ್ದಾರೆ.

ಪತ್ರಿಕೆಯವರೊಂದಿಗೆ ಮಾತನಾಡಿದ ಅವರು, ಇದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿರುತ್ತದೆ. ಮಲೆನಾಡು ಘಟ್ಟಗಳಲ್ಲಿ ಮಳೆ ಆಗಿರುವ ಹಿನ್ನಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ನೀರು ಹರಿದುಬರುತ್ತಿದೆ. ಕೃಷ್ಣಾನದಿಗೆ ಈಗಾಗಲೇ 87 ಟಿಎಂಸಿ ನೀರು ಹರಿದು ಬಂದಿರುವುದರಿಂದ ಆಲಮಟ್ಟಿ ಜಲಾಶಯದಲ್ಲಿ ಎಫ್.ಆರ್.ಎಲ್ ಲೆವಲ್ 517 ತಲುಪಿದೆ. ಹೊಸದಾಗಿ ಸಾಕಷ್ಟು ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ಸಂಬಂಧಿಸಿದ ಎಲ್ಲ ಏತ ನೀರಾವರಿ ಯೋಜನೆಗಳ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕೆಂದು ನಿರಾಣಿ ಒತ್ತಾಯಿಸಿದರು.

ನೇಗಿಲಯೋಗಿಗಳು ಸಾವಿರಾರು ಹಣ ಖರ್ಚು ಮಾಡಿ ಭೂಮಿ ಬಿತ್ತನೆ ಮಾಡಿದ್ದು. ಮಳೆ ಬರದೇ ಇರುವುದರಿಂದ ಭಿತ್ತಿದ ಬೆಳೆಗಳು ಒಣಗಲಾರಂಭಿಸಿವೆ. ಜಾಕವೆಲ್‌ಗಳನ್ನು ಪ್ರಾರಂಭಿಸಿದರೆ ಬಾಡುತ್ತಿರುವ ಬೆಳೆಗಳಿಗೆ ನೀರುಣಿಸುವ ಮೂಲಕ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು. ಆದ್ದರಿಂದ ರಾಜ್ಯದ ಜಲಸಂಪನ್ಮೂಲ ಸಚಿವರು ಮತ್ತು ಕೆಬಿಜೆಎನ್‌ಎಲ್, ಕೆಎನ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಕೂಡಲೇ ಘಟಪ್ರಭಾ ಮತ್ತು ಕೃಷ್ಣಾ ನದಿಯ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಎಲ್ಲಾ ಜಾಕವೆಲ್‌ಗಳನ್ನು ಪ್ರಾರಂಭಿಸಬೇಕೆಂದು ಸೂಚಿಸಿದರು.