ಕನ್ನಡಪ್ರಭ ವಾರ್ತೆ ಇಂಡಿ

ಮಳೆ, ಬೆಳೆ ಇಲ್ಲದೆ ರೈತರು ತೊಂದರೆಯಲ್ಲಿದ್ದಾರೆ. ರೈತರ ನೆರವಿಗೆ ರಾಜ್ಯ ಸರ್ಕಾರ ಬರದೇ, ಸಚಿವ ಸಂಪುಟ ವಿಸ್ತರಣೆಯಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ತಾಲೂಕಿನ ಭೀಮಾ ನದಿ ದಂಡೆಯ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಇದ್ದು, ಅದಕ್ಕಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಜೊತೆಗೆ ಚರ್ಚೆ ಮಾಡಿ, ಭೀಮಾ ನದಿಗೆ ನೀರು ಬಿಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಕೃಷ್ಣಾ ಕಾಲುವೆಗೆ ಈಗಾಗಲೇ 1.5 ಟಿಎಂಸಿ ನೀರು ಹರಿಸುವುದಾಗಿ ಕಲಬುರಗಿ ಆಯುಕ್ತರು ತಿಳಿಸಿದ್ದರು. ಈ ಕೂಡಲೇ ನೀರು ಹರಿಸಬೇಕು, ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ ಅವರು, ರೈತರ ಹೋರಾಟದಿಂದ ಬೆಳೆದ ಜೆಡಿಎಸ್, ಇಂದೂ ರೈತರ ಪರವಾಗಿದೆ. ಬರ ಕುರಿತು ಕೇಂದ್ರ ಸರ್ಕಾರಕ್ಕೆ ರೈತರಿಗೆ ಆಗುವ ತೊಂದರೆಯನ್ನು ಕೇಂದ್ರ ಸಚಿವರಾದ ಕುಮಾರಣ್ಣನವರು ಮನವರಿಕೆ ಮಾಡಲಿದ್ದಾರೆ ಎಂದ ಅವರು, ಅಂತರ್ಜಲ ಸಂಪೂರ್ಣ ಬತ್ತಿದೆ. ಕುಡಿಯುವ ನೀರಿಗಾಗಿ ಟ್ಯಾಂಕರ್ ಮೂಲಕ ನೀರು ಮತ್ತು ತುರ್ತು ಬೋರ್‌ವೆಲ್‌ ಕೊರೆಸಲು ಪ್ರತಿ ತಾಲೂಕಿಗೆ ₹5 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು ಮಾತನಾಡಿ, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ತೀವ್ರ ಬರಗಾಲ ಪರಿಸ್ಥಿತಿಯಿದೆ. ವಾಡಿಕೆಗಿಂತ ಸುಮಾರು ಶೇ.೪೦ಕ್ಕಿಂತಲೂ ಕಡಿಮೆ ಮಳೆಯಾಗಿದೆ. ಬಹಳಷ್ಟು ಕಡೆ ಬಿತ್ತನೆಯಾಗಿಲ್ಲ. ಅಲ್ಪಸ್ವಲ್ಪ ಬಿತ್ತನೆ ಮಾಡಿದ ಬೀಜ ಮಳೆ ಕೊರತೆಯಿಂದ ಮೇಲೆ ಎದ್ದಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ ಎಂದರು.


ಕೋರ್ ಸಮಿತಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ಮಳೆ ಬಾರದಿರುವುದರಿಂದ ಬೆಳೆ ಸಂಪೂರ್ಣ ನಷ್ಟವಾಗಿದೆ. ಸುಮಾರು 70 ಲಕ್ಷ ಸಣ್ಣ ಅತಿ ಸಣ್ಣ ರೈತರ ಖಾತೆಗೆ ತಕ್ಷಣವೇ ಒನ್ ಟಾಯಿಮ್ ಕಾಂಪೇನ್ಷೇಶನ್ ಜಮಾ ಮಾಡಬೇಕು ಎಂದರು.

ಇದಕ್ಕೂ ಮೊದಲು ಇಂಡಿ ವಿಧಾನಸಭಾ ಕ್ಷೇತ್ರದ ಅಗಸನಾಳ, ಹೊರ್ತಿ, ಝಳಕಿ ಹಾಗೂ ಅಂಜುಟಗಿ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ರೈತರ ಅಳಲನ್ನು ನಿಖಿಲ್ ಕುಮಾರಸ್ವಾಮಿ ಅವರು ಆಲಿಸಿ ಮನವಿ ಸ್ವೀಕರಿಸಿದರು.

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಬಸವನಬಾಗೇವಾಡಿಯ ಅಪ್ಪುಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಇಂಡಿ ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ ಹಂಜಗಿ, ಮಾಜಿ ಶಾಸಕ ದೇವಾನಂದ ಚವ್ಹಾಣ, ಅಯೂಬ್‌ ನಾಟಿಕಾರ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಡಾ.ರಮೇಶ ರಾಠೋಡ, ಜಿಪಂ ಮಾಜಿ ಸದಸ್ಯ ರಾಮು ರಾಠೋಡ, ತಾಲೂಕು ಉಪಾಧ್ಯಕ್ಷ ಭೀಮನಗೌಡ ಪಾಟೀಲ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.