ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಅಣ್ಣಾಸಾಹೇಬ ಜೊಲ್ಲೆ ಅವರ ಆಗಮನಕ್ಕಾಗಿ ಕಾಯುತ್ತಿದ್ದ ಸಾವಿರಾರು ಕಾರ್ಯಕರ್ತರು ನಗರದ ಮುನ್ಸಿಪಲ್ ಹೈಸ್ಕೂಲ್ ಹತ್ತಿರ ಆಗಮಿಸುತ್ತಿದ್ದಂತೆಯೇ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಗುಲಾಲ ಎರಚಿ, ಪಟಾಕಿ ಸಿಡಿಸಿ ಹಾಗೂ ಹೂವಿನ ಸುರಿಮಳೆಯೇ ಸುರಿಸಲಾಯಿತು. ಸಾವಿರಾರು ಕಾರ್ಯಕರ್ತರ ಜಯಘೋಷದ ಜೊತೆಗೆ ನಗರದ ಪ್ರಮುಖ ಬೀದಿಯಿಂದ ಸಾಗಿದ ಈ ಬೃಹತ್ ಮೆರವಣಿಗೆಯು ಬಸ್ ನಿಲ್ದಾಣದ ಸಂಭಾಜಿ ರಾಜೇ ವೃತ್ತದ ವರೆಗೆ ಸಾಗಿತು.
ಧನ್ಯವಾದ ತಿಳಿಸಿದ ಜೊಲ್ಲೆ:ಶಾಸಕಿ ಶಶಿಕಲಾ ಜೊಲ್ಲೆ ಅವರು ಮೊದಲಿಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಹಾಗೂ ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು. ತದನಂತರ ಬುಡಾ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೇ ಅವರ ಸಹಕಾರ ಅತ್ಯಮೂಲ್ಯವಾಗಿದ್ದು ಎಂದು ನೆನೆಸುತ್ತಾ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಅವರ ಸಹಕಾರಕ್ಕೆ ಧನ್ಯವಾದಗಳು ತಿಳಿಸಿದರು. ಮತ್ತು ಕ್ಷೇತ್ರದ ಜನರ ಅಭಿವೃದ್ಧಿಗೆ ಪಕ್ಷ ಭೇದ ಮರೆತು ತಾವೆಲ್ಲ ಒಂದಾಗಿ ಈ ಚುನಾವಣೆಯಲ್ಲಿ ಹೋರಾಡಿದ್ದೇವೆ. ಈ ಭಾಗದ ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಬೆಳೆಯಲು ತಾವೆಲ್ಲರೂ ಶ್ರಮಿಸುದಾಗಿ ತಿಳಿಸಿದರು.
ಬುಡಾ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೆ ಅವರು ಮಾತನಾಡುತ್ತಾ ಚಿಕ್ಕೋಡಿ ಜಿಲ್ಲೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಎರಡು ದೊರಕಿದ್ದು ಇದು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ತಿಳಿಸಿದರು. ಜಾರಕಿಹೊಳಿ ಹಾಗೂ ಜೊಲ್ಲೆ ಕುಟುಂಬವು ಎಂದಿಗೂ ಜನರ ಸೇವೆಗಾಗಿ ಸಿದ್ಧ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸ್ ಇಲಾಖೆ ವತಿಯಿಂದ ಖಡಕ್ ಬಂದೊಬಸ್ತ ಮಾಡಲಾಗಿತ್ತು.