ಧಾರವಾಡ:
ಬೆಳಗಾವಿ ಜಿಲ್ಲೆ ಕಿತ್ತೂರಿನ ಹುಲಿಕಟ್ಟಿಯ ಮಹಾಂತೇಶ ದೂರಪ್ಪನವರ 17-ಮದ್ರಾಸ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿ ಗುರುವಾರ ಬೆಳಗ್ಗೆ ರೈಲು ಮೂಲಕ ಧಾರವಾಡ ತಲುಪಿದರು. ಮಹಾಂತೇಶ ಜತೆಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬಸನಗೌಡ ಪಾಟೀಲ, ಅಜಯ ಒಡೆಯರ, ಅಶೋಕ ಶಿವಳ್ಳಿ, ಮೃತ್ತುಜಾ, ರವಿ ಗರಗದ, ಸಚಿನ ಕೆ., ಶಿವಲಿಂಗಯ್ಯ ಸೇರಿದಂತೆ ಹಲವರು ರೈಲ್ವೆ ನಿಲ್ದಾಣದಲ್ಲಿ ಮಹಾಂತೇಶ ಅವರಿಗೆ ಆರತಿ ಎತ್ತಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿ ದೇಶಭಕ್ತಿ ಘೋಷಣೆ ಕೂಗುವ ಮೂಲಕ ವಿಶೇಷವಾಗಿ ಸ್ವಾಗತಿಸಿದರು.
ಕುಟುಂಬ ತೊರೆದು ಹಲವು ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ತವರೂರಿಗೆ ಬರುವಾಗ ಸೈನಿಕನಿಗೆ ಈ ರೀತಿಯಲ್ಲಿ ಸಿಗುವ ಗೌರವ, ಸ್ವಾಗತವು ಆತನಿಗೆ ಹೊಸ ಜೀವನ, ವೃತ್ತಿ ನಡೆಸಲು ಪ್ರೇರಣಾದಾಯಕ ಆಗಲಿದೆ. ಸೇನಾ ವೃತ್ತಿ ಮುಗಿಸಿ ನಾಗರಿಕ ಪ್ರಪಂಚಕ್ಕೆ ಬರುವ ಮಾಜಿ ಸೈನಿಕರು ಸಮಾಜದ ಜತೆಗೆ ಸಂಪರ್ಕ ಬೆಳೆಸಲು ಇಂತಹ ಸನ್ಮಾನ, ಗೌರವಗಳು ಅಗತ್ಯವಾಗಿ ಬೇಕು ಎಂದು ಮಾಜಿ ಸೈನಿಕ ಬಸನಗೌಡ ಪಾಟೀಲ ಹೇಳಿದರು.ಸ್ನೇಹಿತರ ಗೌರವ ಸ್ವೀಕರಿಸಿದ ಮಹಾಂತೇಶ ಇನ್ಮುಂದೆ ನಮ್ಮದು ಹೊಸ ಜೀವನ ಶುರುವಾಗಲಿದೆ. ಪಾಲಕರ, ಸ್ನೇಹಿತರ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಮಾದರಿ ಆಗುವಂತೆ ಬದುಕುವ ಆಶಯ ಹೊಂದಿದ್ದೇನೆ ಎಂದರು. ಮಹಾಂತೇಶ ಅವರ ಕುಟುಂಬದ ಸದಸ್ಯರು ಇದ್ದರು.