ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಪಿ.ರಘುರವರಿಗೆ ಕೋಟೆ ನಾಡು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಬೆಂಗಳೂರಿನಿಂದ ಆಗಮಿಸಿದ ರಘು ಅವರನ್ನು ಚಳ್ಳಕೆರೆ ಟೋಲ್‍ಗೇಟ್‍ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಡೊಳ್ಳು, ತಮಟೆ, ಉರುಮೆ, ಸೋಮನ ಕುಣಿತ, ಗೊಂಬೆ ಕುಣಿತ, ಕೀಲು ಕುದುರೆ, ಕಹಳೆ ಮೆರವಣಿಗೆಗೆ ಕಳೆ ಕಟ್ಟಿತ್ತು. ನಗರದೆಲ್ಲೆಡೆ ಬಾಳೆಕಂಬ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಕಾಂಗ್ರೆಸ್ ಕಚೇರಿ ಮುಂಭಾಗ ಮೆರವಣಿಗೆ ಆಗಮಿಸುತ್ತಿದ್ದಂತೆ ಜೆಸಿಬಿಯಿಂದ ಪಿ.ರಘು ಮತ್ತು ಕವಿತಾ ರಘು ಅವರ ಮೇಲೆ ಹೂಮಳೆ ಸುರಿಸಿ ಬೃಹತ್ ಗಾತ್ರದ ಸೇಬಿನ ಹಾರ ಹಾಕಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೆರವಣಿಗೆ ಮೂಲಕ ಆಗಮಿಸಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಪೌರಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುವ ನೇತಾರ ರಾಹುಲ್‍ಗಾಂಧಿ, ಸುರ್ಜೆವಾಲ, ಮಯೂರ ಜಯಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲಾ ಶಾಸಕರ ಆಶೀರ್ವಾದಿಂದ ನನಗೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ನಾಯಕರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
ಸಮಾಜವನ್ನು ಸ್ವಚ್ಛಗೊಳಿಸುವ ಕಟ್ಟಕಡೆಯ ಪೌರ ಕಾರ್ಮಿಕರಿಗೆ ಅನೇಕ ಸಮಸ್ಯೆಗಳಿವೆ. ಬರೀ ಪೌರ ಕಾರ್ಮಿಕರಷ್ಟೆ ಅಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛಗಾರರಾಗಿ ಕೆಲಸ ಮಾಡುವವರ ಬೇಡಿಕೆಗಳಿಗೂ ಧ್ವನಿಯಾಗಿ ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತೇನೆ. ಹೊಳಲ್ಕೆರೆ ಕ್ಷೇತ್ರದ ಅಭಿಮಾನಿಗಳು ನನಗೆ ತೋರಿಸುತ್ತಿರುವ ಬೆಂಬಲಕ್ಕೆ ಋಣಿಯಾಗಿರುತ್ತೇನೆಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಪಕ್ಷಕ್ಕೆ ನಿಷ್ಟೆಯಿಂದ ದುಡಿಯುವವರಿಗೆ ಒಂದಲ್ಲ ಒಂದು ದಿನ ಅಧಿಕಾರ ಸಿಕ್ಕೇ ಸಿಗುತ್ತದೆಂಬುದಕ್ಕೆ ಪಿ.ರಘು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿರುವುದೇ ಸಾಕ್ಷಿ. ಸಿಕ್ಕಿರುವ ಅವಕಾಶ ಬಳಸಿಕೊಂಡು ಸಮಾಜ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಲಿ ಎಂದು ಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಮರುಳಾರಾಧ್ಯ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಎಚ್.ಅಂಜಿನಪ್ಪ, ನಾಗಣ್ಣ ಸೂರನಹಳ್ಳಿ, ಸೈಯದ್ ಖುದ್ದೂಸ್, ಜಿ.ವಿ.ಮಧುಗೌಡ, ಕಿರಣ್‍ಯಾದವ್, ಲಕ್ಷ್ಮಿಕಾಂತ್, ಲೋಕೇಶ್ವರಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಸೇರಿದಂತೆ ನೂರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಹಾಗೂ ಪೌರ ಕಾರ್ಮಿಕರು ಬೃಹಧಾಕಾರವಾದ ಹಾರ ಹಾಕಿ ಪಿ.ರಘುಗೆ ಸನ್ಮಾನಿಸಿದರು.