ಭುವನ ಸುಂದರಿ ತಿ ಹೆಗಡೆಗೆಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Jul 15, 2024 1:45 AM

ಸಾರಾಂಶ

ಹುಬ್ಬಳ್ಳಿಯಲ್ಲಿ ಡಾ. ಶ್ರುತಿ ಹೆಗಡೆ ಅವರನ್ನು ಕಾರಿನಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಪುಷ್ಪವೃಷ್ಟಿ ಮಾಡಿ, ಪಟಾಕಿ ಸಿಡಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಮೆರಿಕದ ಫ್ಲೋರಿಡಾದಲ್ಲಿ ಈಚೆಗೆ ನಡೆದ "ಮಿಸ್ ಯುನಿವರ್ಸಲ್‌ ಪಿಟೈಟ್‌ 2024 "ರ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿ 40 ದೇಶಗಳ ಸ್ಪರ್ಧೆಗಳನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡ ಹುಬ್ಬಳ್ಳಿಯ ಡಾ. ಶ್ರುತಿ ಹೆಗಡೆ ಅವರನ್ನು ಭಾನುವಾರ ನಗರದ ಜನತೆ ಅದ್ಧೂರಿಯಾಗಿ ಬರಮಾಡಿಕೊಂಡರು.

ಧಾರವಾಡದ ಎಸ್‌.ಕೆ. ಮಾಡೆಲಿಂಗ್‌ ಏಜೆನ್ಸಿ, ಹುಬ್ಬಳ್ಳಿಯ ವಿವಿಧ ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಇಲ್ಲಿನ ಉಣಕಲ್ಲಿನ ಮುಖ್ಯರಸ್ತೆಯಿಂದ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದ ವರೆಗೆ ವಿವಿಧ ಕಲಾ ತಂಡಗಳು, ವಾದ್ಯ ಮೇಳ, ಗೊಂಬೆ ಕುಣಿತ ತಂಡಗಳ ಸಮ್ಮುಖದಲ್ಲಿ ಡಾ. ಶ್ರುತಿ ಹೆಗಡೆ ಅವರನ್ನು ಕಾರಿನಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಪುಷ್ಪವೃಷ್ಟಿ ಮಾಡಿ, ಪಟಾಕಿ ಸಿಡಿಸಲಾಯಿತು.

ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನಕ್ಕೆ ಆಗಮಿಸಿದ ಭುವನ ಸುಂದರಿಗೆ ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು. ಬಳಿಕ ಸಮುದಾಯ ಭವನದ ಆವರಣದಲ್ಲಿ ತ್ರಿವರ್ಣ ಧ್ವಜ ಹಿಡಿದು ರೆಡ್ ಕಾರ್ಪೆಟ್‌ನಲ್ಲಿ ಡಾ. ಶ್ರುತಿ ಹೆಗಡೆ ರ‍್ಯಾಂಪ್ ವಾಕ್ ಮಾಡಿದರು. ಈ ವೇಳೆ ನೆರೆದಿದ್ದವರು ಅವರೊಂದಿಗೆ ಕೈಕುಲುಕಿ, ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಬಳಿಕ ಭುವನ ಸುಂದರಿ ಕಿರೀಟ ಗೆದ್ದ ವಿಡಿಯೋವನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.

ಈ ವೇಳೆ ಭುವನ ಸುಂದರಿ ಡಾ. ಶ್ರುತಿ ಹೆಗಡೆ ಮಾತನಾಡಿ, ನನ್ನ ಈ ಸಾಧನೆಗೆ ನಮ್ಮ ಕುಟುಂಬದ ಸಹಕಾರ ಪ್ರಮುಖ ಕಾರಣವಾಗಿದೆ. ಬಾಲ್ಯದಿಂದಲೇ ವೈದ್ಯೆಯಾಗುವ ಕನಸು ಹೊಂದಿದ್ದೆ. ಎಂಬಿಬಿಎಸ್ ಮಾಡಿ ಅದರೊಂದಿಗೆ ಡಾನ್ಸ್, ಸಂಗೀತ, ಮಾಡೆಲಿಂಗ್ ಕೂಡ ಮುಂದುವರಿಸಿದೆ. ಸದ್ಯ ತುಮಕೂರಿನಲ್ಲಿ ಎಂಡಿ ಮಾಡುತ್ತಿದ್ದೇನೆ. ಯುನಿವರ್ಸಲ್‌ ಪಿಟೈಟ್‌-2024 ಸ್ಪರ್ಧೆಯಲ್ಲಿ ಗೆಲ್ಲಬೇಕೆಂದು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆ. ಸತತ ಛಲ, ಗುರಿಯೊಂದಿಗೆ ಕೊನೆಗೂ ಕನಸು ನೆರವೇರಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳ ಪ್ರತಿಭೆ ಗುರುತಿಸಿ ಸಾಧನೆಗೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ನಮ್ಮ ಪ್ರದೇಶದ ಹೆಣ್ಣುಮಗಳು ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಇಂದಿನ ಯುವತಿಯರಿಗೆ ಡಾ. ಶ್ರುತಿ ಹೆಗಡೆ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರೂ ಶಿಕ್ಷಣದ ಜತೆ ಇಂತಹ ವಿಶೇಷ ಪ್ರತಿಭೆ ಹೊಂದಿ ಸಾಧನೆ ಮಾಡಬೇಕು ಎಂದರು.

ನಾಟ್ಯಾಂಜಲಿ ಕಲಾಕೇಂದ್ರದ ವಿದುಷಿ ಸಹನಾ ಭಟ್, ಡಾ. ಮಂಜುನಾಥಗೌಡ ಪಾಟೀಲ ಮಾತನಾಡಿದರು. ಚೇತನಾ ಪಬ್ಲಿಕ್ ಶಾಲೆಯ ಮಹೇಶ ದ್ಯಾವಪ್ಪನವರ, ಕಟ್ಟಿ ಮಂಗಳಾ ಮಹಿಳಾ ಮಂಡಳದ ಗಿರಿಜಾ‌ ಸಂಗೊಳ್ಳಿ, ಡಾ. ರಮೇಶ, ಅಕ್ಕಮ್ಮ, ಎಂ.ಎಂ. ಕರಿಗೌಡರ, ಡಾ. ಕೆ.ಎಂ. ಹೆಗಡೆ, ಝಡ್.ಎಂ. ಮುಲ್ಲಾ, ಡಾ. ವಿ.ಎಂ. ಭಟ್, ವೈಶಾಲಿ ಅಥಣಿ ಸೇರಿದಂತೆ ಹಲವರಿದ್ದರು.

Share this article