ಇಂದಿನಿಂದ ವಿಧಾನ ಕದನ: ಹಗರಣಗಳ ಬಗ್ಗೆ ವಾಗ್ಯುದ್ಧ

KannadaprabhaNewsNetwork |  
Published : Jul 15, 2024, 01:45 AM ISTUpdated : Jul 15, 2024, 06:59 AM IST
Vidhan soudha

ಸಾರಾಂಶ

ಹಗರಣಗಳ ಭರಾಟೆ ನಡುವೆ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭ‍ವಾಗಲಿದೆ.

 ಬೆಂಗಳೂರು :  ಹಗರಣಗಳ ಭರಾಟೆ ನಡುವೆ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭ‍ವಾಗಲಿದೆ.ಕಳೆದ ಹಲವು ದಿನಗಳಿಂದ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮುಖಂಡರ ನಡುವೆ ವಿವಿಧ ಹಗರಣಗಳ ಸಂಬಂಧ ಬಹಿರಂಗವಾಗಿ ಆರೋಪ-ಪ್ರತ್ಯಾರೋಪ ಕೇಳಿಬರುತ್ತಿದ್ದು, ಸೋಮವಾರದಿಂದ ಕಲಾಪದಲ್ಲಿ ಮುಖಾಮುಖಿಯಾಗಲಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದು. ಆದರೆ, ಈ ಅವಧಿಯಲ್ಲಿ ಹಲವು ಹಗರಣಗಳು ಹೊರಬಂದಿದ್ದರಿಂದ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಆದರೆ, ಹಿಂದಿನ ಸರ್ಕಾರದ ಹಗರಣಗಳನ್ನು ಪ್ರಸ್ತಾಪಿಸುವ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಕಾಂಗ್ರೆಸ್ ಕೂಡ ತಯಾರಿ ನಡೆಸಿದೆ. ಒಟ್ಟಿನಲ್ಲಿ ಈ ಬಾರಿಯ ಅಧಿವೇಶನದ ಕಲಾಪ ವಾಕ್ಸಮರ, ಕೋಲಾಹಲಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ.

ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಿವೇಶನ ಹಂಚಿಕೆ ಪ್ರಕರಣಗಳು ಇತ್ತೀಚೆಗೆ ಭಾರಿ ಸದ್ದು ಮಾಡಿವೆ. ಈ ಎರಡೂ ಪ್ರಕರಣಗಳ ಬಗ್ಗೆಯೇ ಹೆಚ್ಚು ವಾಗ್ವಾದ ನಡೆಯುವ ನಿರೀಕ್ಷೆಯಿದೆ.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವರಾಗಿದ್ದ ಬಿ.ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ಮೂರು ದಿನಗಳ ಹಿಂದೆ ಬಂಧನಕ್ಕೂ ಒಳಗಾದರು. ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ನಾಪತ್ತೆಯಾಗಿದ್ದಾರೆ. ಈ ನಡುವೆ ಮುಡಾ ಪ್ರಕರಣದಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.

ಜೊತೆಗೆ ರಾಜ್ಯದ ಅಭಿವೃದ್ಧಿಯಲ್ಲಿನ ಹಿನ್ನಡೆ, ಕಲುಷಿತ ನೀರಿನ ಪ್ರಕರಣಗಳು, ಪೆಟ್ರೋಲ್‌-ಡೀಸೆಲ್ ಬೆಲೆ ಏರಿಕೆ, ಹಾಲಿನ ದರ ಏರಿಕೆ, ಬರ ನಿರ್ವಹಣೆಯಲ್ಲಿನ ಲೋಪಗಳು ಮತ್ತು ಮಳೆಗಾಲದಲ್ಲಿ ಮುಂಗಾರು ಚಟುವಟಿಕೆಗಳಿಗೆ ಪೂರಕವಾದ ಸೌಲಭ್ಯಗಳ ಕೊರತೆ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳ ಸದಸ್ಯರು ಸಜ್ಜಾಗುತ್ತಿದ್ದಾರೆ.ಇದೇ ವೇಳೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳು, ಸದಸ್ಯರು ಕೇಳುವ ಪ್ರಶ್ನೆಗಳು ಹಾಗೂ ವಿಪಕ್ಷಗಳ ಆರೋಪಕ್ಕೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ ಹಾಗೂ ಅಧಿವೇಶನದಲ್ಲಿ ಖುದ್ದು ಹಾಜರಿದ್ದು, ಸಚಿವರಿಗೆ ತಮ್ಮ ಇಲಾಖಾ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ