ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ವಿಜೃಂಭಣೆಯಿಂದ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಮುಖ ಬಡಾವಣೆಗಳಲ್ಲಿ ಗಣೇಶನ ಮೆರವಣಿಗೆ ಅದ್ಧೂರಿಯಿಂದ ನಡೆದಿದ್ದು, ಒಂದೊಂದು ಏರಿಯಾದಲ್ಲಿ ಒಂದೊಂದು ತರಹದಲ್ಲಿ ಆಚರಣೆ ಮಾಡಲಾಗುತ್ತಿದೆ. ಕೆಲವರು ಟ್ರ್ಯಾಕ್ಟರ್‌ನಲ್ಲಿ, ಇನ್ನು ಕೆಲವರು ಟಂಟಂ ಗಳಲ್ಲಿ ಗಣೇಶನನ್ನು ಮೆರವಣಿಗೆ ಮಾಡಿ ಪ್ರತಿಷ್ಠಾಪಿಸಿದರೇ ನಗರಕ್ಕೆ ಬಂದ ಎತ್ತಿನ ಬಂಡಿಯಲ್ಲಿ ಗಣೇಶನನ್ನು ಒಯ್ದು ಪ್ರತಿಷ್ಠಾಪಿಸಿರುವುದು ವಿಶೇಷವಾಗಿ ಕಂಡು ಬಂದಿತು.ಎತ್ತಿನ ಗಾಡಿಯಲ್ಲಿ ಗಣಪ:
ನಗರದ ಸಿದ್ಧೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲಂಕೃತ ಎತ್ತಿನ ಬಂಡಿಯನ್ನು ತಂದ ಗಣೇಶನ ಭಕ್ತರು ಅದರಲ್ಲಿ ಬೃಹತ್ ಗಣೇಶನ ಮೂರ್ತಿಯನ್ನಿಟ್ಟು ಧೂಮ್ ಧಾಮ್ ಎಂದು ಪಟಾಕಿ ಸಿಡಿಸುತ್ತ ಗಣೇಶನನ್ನು ಸಾಗಿಸಿದರು. ಎಲ್ಲೆಡೆ ಟ್ರ್ಯಾಕ್ಟರ್, ಟಂಟಂ ಗಳಲ್ಲಿ ಗಣೇಶನನ್ನು ಸಾಗಿಸುವುದು ಸಾಮಾನ್ಯವಾಗಿ ಕಂಡುಬಂದರೇ ನಗರದಲ್ಲಿ ಗಣೇಶನನ್ನು ಹೊತ್ತೊಯ್ಯಲು ವಿಶೇಷವಾಗಿ ಎತ್ತಿನ ಬಂಡಿ ಬಂದಿದ್ದು ಎಲ್ಲರ ಗಮನ ಸೆಳೆಯಿತು.ಯುವಕರ ಕೈಯಲ್ಲಿ ರಾರಾಜಿಸಿದ ಗಣೇಶ:ಗಣೇಶ ಪ್ರತಿಷ್ಠಾಪನೆ ವೇಳೆ ರಂಗುರಂಗಾಗಿರುವ ಯುವಕರ ತಂಡ ಗಣೇಶ ಮೂರ್ತಿಗಳನ್ನು ಹೊತ್ತು ಒಯ್ಯುತ್ತಿರುವುದು ಕಂಡುಬಂದಿತು. ಗಣಪತಿಬಪ್ಪ ಮೋರೆಯಾ... ಜೈ ಗಣೇಶ ಜೈ ಗಣೇಶ ಎಂದು ಹಾಡುತ್ತ, ಕುಣಿಯುತ್ತ ಗಣೇಶನನ್ನು ಸಾಗಿಸಿದ ಪರಿ ಸುಂದರವಾಗಿತ್ತು.ಕುಣಿದು ಕುಪ್ಪಳಿಸಿದ ಯುವತಿಯರು:
ನಾಡಿನಾದ್ಯಂತ ಜೋರಾಗಿ ನಡೆದ ಗಣೇಶನ ಹಬ್ಬದಲ್ಲಿ ಹಿಂದೂ-ಮುಸ್ಲಿಂ, ಗಂಡು-ಹೆಣ್ಣು ಎನ್ನುವ ಭೇದ-ಭಾವವಿಲ್ಲದೇ ಎಲ್ಲರೂ ಕುಣಿದು ಕುಪ್ಪಳಿಸಿದರು. ಅದರಲ್ಲೂ ನಗರದ ಮಾರುಕಟ್ಟೆಯ ಏರಿಯಾದಲ್ಲಿಯೂ ಸಹ ಕೇಸರಿ ಉಡುಗೆ ತೊಟ್ಟು ಗುಲಾಲ್ ಎರಚಿಕೊಂಡು ಬಂದು ದೇಶಭಕ್ತಿಯ ಹಾಡುಗಳಿಗೆ ಯುವತಿಯರು ನೃತ್ಯ ಮಾಡುತ್ತಿದ್ದರೇ ಮಾರುಕಟ್ಟೆಯಲ್ಲಿನ ಜನರೆಲ್ಲ ನಿಂತು ನೋಡುತ್ತಿದ್ದರು.ಬ್ಯಾಂಜೋ, ಪಟಾಕಿ, ಕೇಸರಿ ಧ್ವಜಗಳ ಸದ್ದು:ಗಣೇಶ ಚತುರ್ಥಿಯ ಅಂಗವಾಗಿ ಗಲ್ಲಿ ಗಲ್ಲಿಯಲ್ಲಿ ಪ್ರತಿಷ್ಠಾಪಿಸುವ ಗಣೇಶನ ಎದುರಿಗೆ ಭಕ್ತರೆಲ್ಲ ಸೇರಿ ಬಾಜಾ ಬಜಂತ್ರಿ ಬಾರಿಸುವುದು, ಹಲಗೆನಾದ, ಪಟಾಕಿ ಸಿಡಿಸುವುದು ಎಲ್ಲೆಡೆ ಗಣೇಶನ ಛತ್ರಗಳಲ್ಲಿ ಕಂಡುಬರುತ್ತಿವೆ. ಇನ್ನು ನಗರದಾದ್ಯಂತ ಗಣೇಶನ ಹಾಗೂ ಆಂಜನೇಯನ ಭಾವಚಿತ್ರಗಳುಳ್ಳ ಕೇಸರಿ ಧ್ವಜಗಳ ಹಾರಾಟ ನಿರಂತರವಾಗಿ ನಡೆಯುತ್ತಿದೆ. ಇನ್ನುಳಿದಂತೆ ನಿತ್ಯ ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಗಣೇಶನ ಪೂಜೆಯ ಸಮಯದಲ್ಲಿ ಪಟಾಕಿಗಳ ಸದ್ದು ಹಬ್ಬದ ಸಂಭ್ರಮ ಹೆಚ್ಚಿಸಿತು.