ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ, ಕನ್ನಡ ಜ್ಯೋತಿ ರಥಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಹಂಪಿಯಲ್ಲಿ ಚಾಲನೆ ನೀಡಿದ್ದ ಕನ್ನಡ ಜ್ಯೋತಿ ರಥವನ್ನು ತಾಲೂಕು ಆಡಳಿತ ಹಾಗೂ ಶಾಸಕರು ಅದ್ಧೂರಿಯಾಗಿ ಸ್ವಾಗತಿಸಿದರು.ಇಲ್ಲಿನ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಕನ್ನಡ ಜ್ಯೋತಿ ರಥಕ್ಕೆ ಶಾಸಕ ಕೃಷ್ಣನಾಯ್ಕ ಹಾಗೂ ತಹಸೀಲ್ದಾರ್ ಕೆ. ಶರಣಮ್ಮ ಕನ್ನಡ ಧ್ವಜದೊಂದಿಗೆ ಸ್ವಾಗತಿಸಿದರು. ಕನ್ನಡ ಗೀತೆಗಳಿಗೆ ಕಲಾ ತಂಡಗಳು ಕನ್ನಡ ಧ್ವಜ ಹಿಡಿದು ಪ್ರದರ್ಶನ ನೀಡಿದ ನೃತ್ಯ ಕನ್ನಡಿಗರ ಜನಮನ ಸೆಳೆಯಿತು.
ಕನ್ನಡ ಜ್ಯೋತಿ ರಥಕ್ಕೆ ಸಮಾಳ, ನಂದಿಕೋಲು ಸೇರಿದಂತೆ ಮಂಗಲ ವಾದ್ಯಗಳೊಂದಿಗೆ ಪಟ್ಟಣದ ವಿವಿಧ ಕಡೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಜಿಬಿಆರ್ ಕಾಲೇಜು ಹಾಗೂ ಎಸ್‌ಆರ್‌ಎಂಪಿಪಿ ಪದವಿ ಕಾಲೇಜು ಮುಂಭಾಗದಿಂದ ಹರಪನಹಳ್ಳಿ ತಾಲೂಕಿಗೆ ಬೀಳ್ಕೊಡಲಾಯಿತು.ಕನ್ನಡ ಜ್ಯೋತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೃಷ್ಣನಾಯ್ಕ, ಈ ಹಿಂದಿನ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣಗೊಂಡು ಸುವರ್ಣ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಈ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಡೀ ರಾಜ್ಯದ ತುಂಬೆಲ್ಲ ಸಂಚರಿಸುವ ಕನ್ನಡ ಜ್ಯೋತಿ ರಥ ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಕೃಷ್ಣನಾಯ್ಕ, ತಹಸೀಲ್ದಾರ್ ಕೆ. ಶರಣಮ್ಮ, ತಾಪಂ ಇಒ ಡಾ. ಜಯರಾಮ ಚವ್ಹಾಣ್, ಸಮಾಜ ಕಲ್ಯಾಣಾಧಿಕಾರಿ ಆನಂದ್ ಡೊಳ್ಳಿನ್, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಅಶೋಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.