ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Nov 22, 2024 1:16 AM

ಸಾರಾಂಶ

ಸಮ್ಮೇಳನದಲ್ಲಿ 30 ವರ್ಷಗಳ ಬಳಿಕ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಜಿಲ್ಲೆಯ ಜನತೆ ಮನೆ ಹಬ್ಬದಂತೆ ಆಚರಣೆ ಮಾಡಬೇಕು. ಸಮ್ಮೇಳನಕ್ಕೆ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಸಮ್ಮೇಳನದ ಪ್ರಚಾರ ರಥವು ಗುರುವಾರ ತಾಲೂಕಿಗೆ ಆಗಮಿಸಿತ್ತು.

ಕೆ.ಆರ್.ಪೇಟೆ ತಾಲೂಕಿನಲ್ಲಿ ಪ್ರಚಾರ ಮುಗಿಸಿ ತಾಲೂಕಿಗೆ ಆಗಮಿಸಿದ ಪ್ರಚಾರ ರಥವನ್ನು ಚಿನಕುರಳಿಯಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಕನ್ನಡ ಭಾವುಟ ಹಿಡಿದು ಕನ್ನಡದ ಪರವಾಗಿ ಘೋಷಣೆ ಮೊಳಗಿಸುವ ಮೂಲಕ ಪ್ರಚಾರ ರಥವನ್ನು ಬರಮಾಡಿಕೊಂಡರು.

ಬಳಿಕ ಕೆ.ಬೆಟ್ಟಹಳ್ಳಿ, ಎಲೆಕೆರೆ ಹ್ಯಾಂಡ್‌ಪೋಸ್ಟ್ ಮೂಲಕ ಪಾಂಡವಪುರ ಪಟ್ಟಣಕ್ಕೆ ಆಗಮಿಸಿದ ರಥವನ್ನು ಪಟ್ಟಣದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯ ಎಚ್.ತ್ಯಾಗರಾಜು, ತಹಸೀಲ್ದಾರ್ ಸಂತೋಷ್ ಸ್ವಾಗತಿಸಿದರು. ಬಳಿಕ ಪ್ರಚಾರ ರಥವು ಪಟ್ಟಣದ ಪ್ರಮುಖ ಬೀದಿಗಳು, ಶಾಲೆಗಳಲ್ಲಿ ಸಂಚರಿಸಿ ಪಟ್ಟಣದ ಪ್ರವಾಸಿ ಮಂದಿರದ ಬಳಿಕ ಸ್ಥಗಿತಗೊಂಡಿತು. ಶುಕ್ರವಾರದಿಂದ ಚಿನಕುರಳಿ ಜಿಪಂ ವ್ಯಾಪ್ತಿಯಲ್ಲಿ ಸಂಚರಿಸಿತು.

ಬಳಿಕ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸಮ್ಮೇಳನದಲ್ಲಿ 30 ವರ್ಷಗಳ ಬಳಿಕ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಜಿಲ್ಲೆಯ ಜನತೆ ಮನೆ ಹಬ್ಬದಂತೆ ಆಚರಣೆ ಮಾಡಬೇಕು. ಸಮ್ಮೇಳನಕ್ಕೆ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪ್ರಚಾರ ರಥವು ನಾಡಿನ ವಿವಿಧ ಭಾಗದಲ್ಲಿ ಪ್ರಚಾರ ನಡೆಸಿ ಮಂಡ್ಯ ಜಿಲ್ಲೆಗೆ ಆಗಮಿಸಿದೆ. ತಾಲೂಕಿಗೆ ಆಗಮಿಸಿದ ಪ್ರಚಾರ ರಥವನ್ನು ಚಿನಕುರಳಿ ಗ್ರಾಮದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಬಳಿಕ ಪಟ್ಟಣದಲ್ಲಿ ಸಂಚರಿಸಿ ನಂತರ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸಿ ಪ್ರಚಾರ ನಡೆಸಲಿದೆ. ಸಾರ್ವಜನಿಕರು, ಕನ್ನಡಾಭಿಮಾನಿಗಳು ಭವ್ಯವಾಗಿ ರಥವನ್ನು ಸ್ವಾಗತಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ತಾಲೂಕು ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಚಿನಕುರಳಿ ಡೇರಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಅಧ್ಯಕ್ಷೆ ಗಾಯಿತ್ರಿ, ಪುರಸಭೆ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಅಶೋಕ್, ಮುಖ್ಯಾಧಿಕಾರಿ ಸತೀಶ್‌ಕುಮಾರ್ ಸೇರಿದಂತೆ ಪುರಸಭೆ ಸದಸ್ಯರು, ಕಸಾಪ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.

Share this article