ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆಯ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕನ್ನಡ ಬಾವುಟ ಹಾರಿಸುವ ಮೂಲಕ ಸ್ವಾಗತಿಸಿದರು.
ಮೆರವಣಿಗೆಗೆ ಮುನ್ನ ವಿವಿಧ ಜಾನಪದ ನೃತ್ಯ ಕಲಾ ತಂಡಗಳಿಂದ ಕನ್ನಡ ಗಾಯನಗಳಿಗೆ ನೃತ್ಯ ಪ್ರದರ್ಶನ ನೀಡಿದ್ದು ಜನಮನ ಸೆಳೆಯಿತು, ನೋಡುಗರ ಚಪ್ಪಾಳೆಗಳ ನಡುವೆ ಸ್ಥಳೀಯ ಕಲಾವಿದರ ಹಲಗೆ, ತಾಷೆ-ರಾಂಡೋಲ್, ಕಂಸಾಳೆ, ವೀರಗಾಸೆ, ಡೊಳ್ಳು ಸೇರಿದಂತೆ ಕಲಾ ತಂಡಗಳಿಂದ ಭರ್ಜರಿ ಸಂಭ್ರಮದ ಮೆರವಣಿಗೆ ಆರಂಭಗೊಂಡಿತು.ಉಪಮೇಯರ್ ಬಿ. ಜಾನಕಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಪಾಲಿಕೆ ಆಯುಕ್ತ ಜಿ. ಖಲೀಲ್ ಸಾಬ್, ಅಬಕಾರಿ ಉಪನಿರೀಕ್ಷಕ ಮಂಜುನಾಥ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಮೇಶ್ ಬಾಬು, ತಹಸೀಲ್ದಾರ್ ಗುರುರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಹೊನ್ನುರಪ್ಪ ಸೇರಿದಂತೆ ಪಾಲಿಕೆ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಭಾಗವಹಿಸಿದ್ದರು.
ಮೆರವಣಿಗೆಯ ನಂತರ ಸಂಜೆ ರಾಘವ ಕಲಾಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಕನ್ನಡಪರ ಸಂಘಟನೆಗಳ ಸಾರಥ್ಯದಲ್ಲಿ ನಡೆದ ಈ ರಥಯಾತ್ರಗೆ ಶ್ರಮಿಸಿದ ಎಲ್ಲರಿಗೂ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆಯ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು 500 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಸಿ, ಗಮನ ಸೆಳೆದರು. 16 ಬಿಆರ್ ವೈ 4
ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆ ಅಂಗವಾಗಿ ಬಳ್ಳಾರಿಯಲ್ಲಿ ವಿದ್ಯಾರ್ಥಿಗಳು 500 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಸಿದರು.