ಕನ್ನಡಪ್ರಭ ವಾರ್ತೆ ರಾಯಚೂರು
ವಿದೇಶಿ ಸಂಸ್ಕೃತಿಯ ರೀತಿಯಲ್ಲಿ ಹೊಸ ವರ್ಷ ಆಚರಣೆಯ ಪದ್ಧತಿಯ ನಡುವೆಯೂ ಧಾರ್ಮಿಕ ಕೇಂದ್ರಗಳಿಗೆ ಬಂದು ಹೊಸ ವರ್ಷವನ್ನು ಸ್ವಾಗತಿಸುವ ಪರಂಪರೆ ಹೆಚ್ಚಾಗುತ್ತಿದೆ. ಅದರಂತೆ ಮಂಗಳವಾರ 2024 ಗುಡ್ ಬಾಯ್ ಹೇಳಿ 2025 ಕ್ಕೆ ಅದ್ದೂರಿ ಸ್ವಾಗತ ಕೋರಿದ ಜನರು, ಕುಟುಂಬಸ್ಥರೊಂದಿಗೆ ಗುಡಿ-ಗುಂಡಾರಗಳಿಗೆ ತೆರಳಿ ವರ್ಷದ ಮೊದಲ ದಿನವನ್ನು ಕಳೆದರು.ಜಿಲ್ಲಾ ಕೇಂದ್ರವಾದ ನಗರ ಸೇರಿ ವಿವಿಧ ತಾಲೂಕು, ಹೋಬಳಿ, ಗ್ರಾಮೀಣ ಭಾಗದಲ್ಲಿ ಹೊಸ ವರ್ಷ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಸಂಭ್ರಮಾಚರಣೆಗಳು ಆರಂಭಗೊಂಡವು ಮಧ್ಯರಾತ್ರಿ 12 ಆಗುತ್ತಿದ್ದಂತೆ ಪಟಾಕಿ ಸಿಡಿಸಿ, ಪಾರ್ಟಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.ಹೊಸ ವರ್ಷ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಿಂದ ಸುಕ್ಷೇತ್ರ ಮಂತ್ರಾಲಯಕ್ಕೆ ಭಕ್ತ ಸಾಗರವೇ ಹರಿದು ಬಂತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ವಸತಿಗಾಗಿ ಭಕ್ತರು ಪರದಾಡಿದರು. ಮೊದಲ ದಿನದ ಪ್ರಯುಕ್ತ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಶ್ರೀಮಠದ ಪೀಠಾಧಿಪತಿ ಡಾ.ಸುದೇಂದ್ರ ತೀರ್ಥ ಶ್ರೀಪಾದಂಗಳವರಿಂದ ಪೂಜೆ ಸಲ್ಲಿಸಿ, ಬಂದ ಭಕ್ತರಿಗೆ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.ಸೂಚನೆ ಮೇಲೂ ಬಂದ ಭಕ್ತರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಡಿ.25ರಿಂದ ಜ.2 ರವೆಗೆ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಆನ್ ಲೈನ್ ವಸತಿ ಗೃಹ ಬುಕ್ ಮಾಡಿದ ಭಕ್ತರಿಗೆ ಹಾಗೂ ವಸತಿಗೃಹಗಳ ದಾನಿನೀಡಿದ ಭಕ್ತರಿಗೆ ಕೊಠಡಿಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಅಲ್ಲದೇ ಶ್ರೀಮಠದ ಶಿಷ್ಟಾಚಾರದ ಪ್ರಕಾರ ಕೊಠಡಿಗಳನ್ನು ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಸತಿ ಸವಲತ್ತಿನಲ್ಲಿ ಉಂಟಾಗುವ ಏರುಪೇರಿನ ಬಗ್ಗೆ ಶ್ರೀಮ ಮುಂಚಿತವಾಗಿಯೇ ಸೂಚನೆ ನೀಡಿದ್ದರು ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ವಸತಿ ಸೇರಿ ಇತರೆ ಸವಲತ್ತುಗಳಿಲ್ಲದೇ ಭಕ್ತರು ಸಮಸ್ಯೆ ಎದುರಿಸಿದರು.ಹೆಚ್ಚಿನ ದರಕ್ಕೆ ರೂಮ್ಸ್: ಹೊಸವರ್ಷದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಆಗಮಿಸಿದ ಭಕ್ತರ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿ ವಸತಿ ಗೃಹಗಳನ್ನು 2 ದಿಂದ 5 ಸಾವಿರ ರು. ಹೆಚ್ಚಿನ ಬಾಡಿಗೆಯನ್ನು ನಿಗದಿ ಪಡಿಸಿ ಭಕ್ತರ ಜೇಬನ್ನು ಖಾಲಿ ಮಾಡಿದರು. ವಸತಿ ಸಿಗದ ಭಕ್ತರು ಶ್ರೀಮಠದ ಮುಂಭಾಗದ ಆವರಣದಲ್ಲಿ ಕೊರೆಯುವ ಚಳಿಯಲ್ಲೇ ರಾಯರನ್ನು ನೆನೆದು ಮಲಗಿದರು. ಕ್ರಿಸ್-ಮಸ್ ಹಾಗೂ ಹೊಸ ವರ್ಷ ಹಿನ್ನೆಲೆಯಲ್ಲಿ ರಾಯರ ದರ್ಶನ ಪಡೆಯುವುದಕ್ಕಾಗಿ ಬೆಂಗಳೂರಿನಿಂದ ಕುಟುಂಬ ಸಮೇತರಾಗಿ ಆಗಮಿಸಿದ್ದು, ವಸತಿ ಸಿಗದೇ ಸಮಸ್ಯೆ ಅನುಭವಿಸಿದೆವೆ. ಆನ್ ಲೈನ್ ನಲ್ಲಿ ರೂಮ್ಸ್ ಬುಕ್ ಆಗದ ಕಾರಣಕ್ಕೆ ನೇರವಾಗಿ ಸುಕ್ಷೇತ್ರಕ್ಕೆ ಬಂದು ಪ್ರಯತ್ನಿಸಿದರು ಸಿಗಲಿಲ್ಲ, ಅನಿವಾರ್ಯವಾಗಿ ಖಾಸಗಿ ವಸತಿಯಲ್ಲಿ ಹೆಚ್ಚಿನ ದರಕ್ಕೆ ರೂಮ್ ಪಡೆಯಬೇಕಾಯ್ತು ಎಂದು ಬೆಂಗಳೂರಿನ ಭಕ್ತ ಪವನ ಕುಮಾರ ಆಚಾರ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.ಕವಿತಾಳದಲ್ಲೂ ಸಂಭ್ರಮಾಚರಣೆ
ಕವಿತಾಳ: ಪಟ್ಟಣದ ವಿವಿಧೆಡೆ ಹೊಸ ವರ್ಷವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಯಿತು.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯುವಕರು ರಾತ್ರಿ ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸಿದರು. ಸಮೀಪದ ವಟಗಲ್, ಯತಗಲ್ ಗ್ರಾಮಗಳಲ್ಲೂ ಯುವಕರು ಸಂಭ್ರಮಾಚರಣೆ ಮಾಡಿದರು.ಇಲ್ಲಿನ ಸ್ವಾಮಿ ವಿವೇಕಾನಂದ ಸಹಕಾರ ಸಂಘದಲ್ಲಿ ಸಹಕಾರ ಸಂಘದ 24ನೇ ವರ್ಷಾಚರಣೆಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ರಾಜೇಶ ಬನ್ನಿಗಿಡದ, ನಿರ್ದೇಶಕರಾದ ಜಯರಾಂ ಉಡುಪಿ, ಚನ್ನಪ್ಪ, ಗುರುರಾಜ ಬಾಗೋಡಿ, ಸಿಇಒ ಲಕ್ಷ್ಮೀಪತಿ, ವ್ಯವಸ್ತಾಪಕ ರಾಘವೇಂದ್ರ ಕುಲ್ಕರ್ಣಿ, ದಿವ್ಯಾ ಬಾಗೋಡಿ, ಸಿಬ್ಬಂದಿ ಈಶ್ವರಪ್ಪ, ಕಿರಣಕುಮಾರ, ಮನೋಜ್, ಚನ್ನಬಸವ ವಟಗಲ್, ಮಲ್ಲಪ್ಪ, ಗ್ರಾಹಕರು ಉಪಸ್ಥಿತರಿದ್ದರು.ಮುದಗಲ್‌ನಲ್ಲಿ ವಿಶೇಷ ಪೂಜೆ
ಮುದಗಲ್ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕ್ಯಾಲೆಂಡರ್ ವರ್ಷದ ಪ್ರಕಾರ ಜನವರಿ ಒಂದರಂದು ಹೊಸ ವರ್ಷವನ್ನು ಕೇಕ್ ಕತ್ತರಿಸಿ ಪರಸ್ಪರ ಶುಭ ಕೋರುವುದರ ಮೂಲಕ ಸ್ವಾಗತಿಸಲಾಯಿತು.ಇಲ್ಲಿನ ರಾಮಲಿಂಗೇಶ್ವರ, ನಗರೇಶ್ವರ, ನೀಲಕಂಠೇಶ್ವರ ದೇವಸ್ಥಾನಗಳು ಹಾಗೂ ಸಮೀಪದ ಛತ್ತರ ಗ್ರಾಮದ ಆಂಜನೇಯ ದೇವಾಲಯ ಹಾಗೂ ಸುಕ್ಷೇತ್ರ ಸಜ್ಜಲಗುಡ್ಡ , ಅಂಕಲಿಮಠದಲ್ಲಿಯೂ ಕೂಡ ಹೊಸ ವರ್ಷಾಚರಣೆ ಪ್ರಯುಕ್ತ ಭಕ್ತರು ಇಷ್ಟಾರ್ಥ ಸಿಧ್ಧಿಗಾಗಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.ಡಿ.31 ರಂದು ಗಲ್ಲಿ-ಗಲ್ಲಿಗಳಲ್ಲಿ ಮಕ್ಕಳು, ಯುವಕರು ಮಹಿಳೆಯರು ಡಿಜೆ ಹಾಡಿಗೆ ನರ್ತನೆ ಮಾಡಿ ಕೇಕ್ ಕತ್ತರಿಸುವುದರ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು. ಯುವಕರು ರಸ್ತೆಯುದ್ದಕ್ಕೂ ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚಿ ಶುಭ ಕೋರಿದರು. ಇದಲ್ಲದೇ ಬುಧವಾರ ಬೆಳಿಗ್ಗಯಿಂದಲೂ ಶಾಲಾ ಕಾಲೇಜುಗಳಲ್ಲಿ ಮಕ್ಕಳು ಬಗೆಬಗೆಯ ಕೇಕ್ ಖರೀದಿಸಿ ನೆಚ್ಚಿನ ಶಿಕ್ಷಕರೊಡಗೂಡಿ ಹೊಸ ವರ್ಷವನ್ನು ಸಂಭ್ರಮಸಿದರು.