ಕನ್ನಡಪ್ರಭ ವಾರ್ತೆ ಗೋಕರ್ಣ
ವಿವಿಧೆಢೆ ಇರುವ ಐದುನೂರಕ್ಕೂ ಹೆಚ್ಚು ರೆಸಾರ್ಟ್, ಹೋಟೆಲ್‌ಗಳಲ್ಲಿ ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಿ ಡಿಜೆ ಹಾಡು ಹಾಕಲಾಗಿತ್ತು. ರಾತ್ರಿ ೧೦ ಗಂಟೆಯಿಂದಲೇ ಕುಳಿತುಕೊಂಡಿದ್ದ ಯುವ ಸಮುದಾಯದ ಪ್ರವಾಸಿಗರು ಮಧ್ಯರಾತ್ರಿ ೧೨ ಗಂಟೆಗೆ ಕಡಲ ತಟದ ಬಳಿ ಬಂದು ಬೆಳಕಿನ ಬಲೂನ್ ಬಿಡುವುದು, ಸಿಡಿಮದ್ದು ಹಚ್ಚುವುದು, ಕುಡಿದು-ಕುಣಿದು ಕುಪ್ಪಳಿಸುವುದು ಸೇರಿದಂತೆ ವಿವಿಧ ಚಟುವಟಿಕೆ ಮೂಲಕ ಹೊಸ ವರ್ಷ ಬರಮಾಡಿಕೊಂಡರು. ನಂತರ ಪರಸ್ಪರ ಶುಭಾಶಯ ಕೋರಿತ್ತಾ ಸಂಭ್ರಮಿಸಿದರು. ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ಸಿಡಿಮದ್ದಿನ ಚಿತ್ತಾರ ಬಹು ಆಕರ್ಷಕವಾಗಿತ್ತು.
ಕಡಲ ತೀರದಲ್ಲಿ ಕೆಲವು ಯುವಕ-ಯುವತಿಯರು ಮದ್ಯ ಸೇವಿಸುತ್ತಾ ತೂರಾಡುತ್ತ ಕುಣಿಯುತ್ತಿರುವ ದೃಶ್ಯವೂ ಕಂಡು ಬಂತು.ಕಡಲತಟದಿಂದ ವಾಪಸ್ ತಮ್ಮ ವಸತಿಗೃಹಕ್ಕೆ ತೆರಳಲಾಗದೆ ಹಲವು ಯುವತಿಯರು ನಶೆಯಲ್ಲಿ ತೇಲಾಡಿದ್ದು ಅವರ ಗೆಳೆಯರು ಹರಸಾಹಸ ಮಾಡಿ ಹೊತ್ತುಕೊಂಡು ಹೋಗುತ್ತಿರುವುದು ಕಂಡು ಬಂತು.
ಇನ್ನು ಈ ಎಲ್ಲಾ ಕಡಲ ತೀರದಲ್ಲಿ ಸ್ಥಳೀಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರವಾಸಿಗರ ಹೊಸ ವರ್ಷದ ಆಚರಣೆ ವೀಕ್ಷಿಸಿದರು. ವಿದೇಶಿ ಪ್ರವಾಸಿಗರ ಸಂಖ್ಯೆ ತೀರ ಕಡಿಮೆಯಾಗಿದ್ದು, ಬೆರಳೆಣಿಕೆಯ ವಿದೇಶಿಗರು ಪಾಲ್ಗೊಂಡಿದ್ದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಕುಡ್ಲೆ ಕಡಲ ತೀರಕ್ಕೆ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿ.ಐ. ಶ್ರೀಧರ್ ಎಸ್.ಆರ್. ನೇತೃತ್ವದಲ್ಲಿ ಪಿ.ಎಸ್.ಐ. ಖಾದರ್ ಬಾಷಾ ಶಶಿಧರ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ಮೀಸಲು ಪೊಲೀಸ್ ಪಡೆ ಸೇರಿದಂತೆ ೨೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಈ ವರ್ಷ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದ್ದು ಜನರಿಗಿಂತ ಹೆಚ್ಚು ಪೊಲೀಸ್ ಸಿಬ್ಬಂದಿಗಳೇ ಎಲ್ಲೆಡೆ ಕಾಣುತ್ತಿದ್ದರು.ಗೋಕರ್ಣ ಬೀಚ್‌ನಲ್ಲಿ ಕುಸಿದು ಬಿದ್ದು ಪ್ರವಾಸಿಗ ಸಾವುಸಮುದ್ರದ ನೀರಿಗಿಳಿಯಲು ಹೊರಟಿದ್ದ ಪ್ರವಾಸಿಗ ಕಡಲ ತಟದಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ಗುರುವಾರ ಮಧ್ಯಾಹ ಇಲ್ಲಿನ ಮಿಡ್ಲ ಬೀಚ್‌ನಲ್ಲಿ ನಡೆದಿದೆ.ತಮಿಳುನಾಡಿನ ಆರ್. ಕುಮಾರ (63) ಸಾವಿಗೀಡಾದವರು.ಹೊಸ ವರ್ಷಾಚರಣೆ ನಿಮಿತ್ತ ಇಲ್ಲಿಗೆ ಬಂದಿದ್ದರು ಎನ್ನಲಾಗಿದ್ದು, ಸಮುದ್ರದಲ್ಲಿ ಈಜಾಡಲು ಹೊರಟಿದ್ದ ಸಮಯದಲ್ಲಿ ನೀರಿಗಿಳಿಯಬೇಕು ಎನ್ನುವಷ್ಟರಲ್ಲೇ ಕುಸಿದ್ದು ಬಿದ್ದಿದ್ದಾರೆ. ತಕ್ಷಣ ಅದನ್ನ ಗಮನಿಸಿ ಈ ಭಾಗದ ರೆಸಾರ್ಟ್ ಮಾಲೀಕರು ನಿಯೋಜಿಸಿಕೊಂಡ ಜೀವರಕ್ಷಕ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಆದರೆ ಅಲ್ಲಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ನಂತರ ಮೃತದೇಹವನ್ನು ಜಿಲ್ಲಾ ಶವಾಗಾರಕ್ಕೆ ರವಾನಿಸಲಾಗಿದೆ.ಈ ಕುರಿತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಕುಟುಂಬಸ್ಥರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.