ಹುಲಗೂರು ಗ್ರಾಮದ ಅಭಿವೃದ್ಧಿಗೆ 30 ಕೋಟಿ ರು. ಅನುದಾನ ಬೇಡಿಕೆಯಿದೆ

KannadaprabhaNewsNetwork |  
Published : Nov 29, 2026, 02:00 AM IST
ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮದಲ್ಲಿ 17 ಕೋಟಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಕಳೆದ 2 ವರ್ಷದಲ್ಲಿ ಹುಲಗೂರ ಒಂದೇ ಗ್ರಾಮಕ್ಕೆ ಸುಮಾರು 30 ಕೋಟಿ ಅನುದಾನ ಹಾಕಲಾಗಿದೆ. ಇನ್ನೂ 30 ಕೋಟಿ ಅನುದಾನದ ಬೇಡಿಕೆ ಇದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.

ಶಿಗ್ಗಾಂವಿ: ಹುಲಗೂರ ಗ್ರಾಮ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಬಹಳಷ್ಟು ಜನ ಅಧಿಕಾರಕ್ಕೆ ಬಂದರೂ ಹುಲಗೂರ ಬಹಳಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ 2 ವರ್ಷದಲ್ಲಿ ಹುಲಗೂರ ಒಂದೇ ಗ್ರಾಮಕ್ಕೆ ಸುಮಾರು 30 ಕೋಟಿ ಅನುದಾನ ಹಾಕಲಾಗಿದೆ. ಇನ್ನೂ 30 ಕೋಟಿ ಅನುದಾನದ ಬೇಡಿಕೆ ಇದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.

ತಾಲೂಕಿನ ಹುಲಗೂರ ಗ್ರಾಮದಲ್ಲಿ ರು. 17 ಕೋಟಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಗ್ರಾಮದಲ್ಲಿ ಇನ್ನೂ ಮಣ್ಣಿನ ರಸ್ತೆಗಳೇ ಇವೆ. ನಾನು ಅಲ್ಲಿಯ ಜನರಿಗೆ ಮಾತು ಕೊಟ್ಟು ಬಂದಿದ್ದೇನೆ, ಎಸ್‌ಸಿ, ಎಸ್ಟಿ ಕಾಲೋನಿಗಳು ಇನ್ನೂ ಅಭಿವೃದ್ಧಿ ಆಗಬೇಕಿವೆ, ನಾನು ಶಾಸಕನಾಗಲು ಎಲ್ಲ ಸಮುದಾಯಗಳ ಶ್ರಮವಿದೆ. ಆದ್ದರಿಂದ ಆ ಎಲ್ಲ ಸಮುದಾಯಗಳ ಕೆಲಸಗಳನ್ನು ಮಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ, ಶಿಗ್ಗಾಂವಿ ತಾಲೂಕಿನಲ್ಲಿ 21 ಕೆಪಿಎಸ್‌ಸಿ ಶಾಲೆಗಳನ್ನು ಮಂಜೂರು ಮಾಡಿಕೊಂಡು ಬಂದು ಒಂದೊಂದಾಗಿ ಈಗ ಭೂಮಿ ಪೂಜಾ ಕಾರ್ಯಗಳನ್ನು ಮಾಡಲಾಗುತ್ತಿದೆ. ನಮ್ಮ ಉದ್ದೇಶ ನಮ್ಮ ತಾಲೂಕಿನ ಜನರ ಮಕ್ಕಳು ದೊಡ್ಡ ನಗರಗಳಿಗೆ ತೆರಳುವುದನ್ನು ಬಿಡಬೇಕು. ಅವರಿಗೆ ಆ ಶಿಕ್ಷಣ ನಮ್ಮಲ್ಲಿಯೇ ಸಿಗಬೇಕು ಎಂಬುದಾಗಿದೆ ಎಂದರು.

ವಿರೋಧ ಪಕ್ಷದವರು ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಟೀಕೆ ಮಾಡುತ್ತಾರೆ, ಅವರಿಗೆ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗುತ್ತಿಲ್ಲ, ಹೊಟ್ಟೆ ಉರಿಗೆ ಯಾವುದೇ ಔಷಧಿ ಇಲ್ಲ, ವಿರೋಧ ಪಕ್ಷದವರು ಮನಸ್ಸನ್ನು ಶುದ್ಧ ಮಾಡಿಕೊಳ್ಳಬೇಕು, ನಮಗೆ ಜನರು ಅಧಿಕಾರ ಕೊಟ್ಟಿದ್ದಾರೆ, ನಮ್ಮ ಸರಕಾರ ದುಡ್ಡು (ಅನುದಾನ) ಕೊಟ್ಟಿದೆ, ಅದಕ್ಕಾಗಿ ಅಭಿವೃದ್ಧಿ ಮಾಡಿ ಕಲ್ಲಲ್ಲಿ ಹೆಸರು ಹಾಕಿಸಿಕೊಳ್ಳುತ್ತಿದ್ದೇವೆ, ನೀವು ಅಭಿವೃದ್ಧಿ ಮಾಡಿ ಹಾಕಿಸಿಕೊಳ್ಳಿ ಎಂದು ಕಾಂಗ್ರೆಸ್ ವಿರೋಧಿಗಳಿಗೆ ಚಾಟಿ ಬೀಸಿದರು.

ಶಿಗ್ಗಾಂವಿ -ಸವಣೂರ ಕ್ಷೇತ್ರ ದಾರ್ಶನಿಕರ ಕ್ಷೇತ್ರವಾಗಿದೆ, ಕನಕದಾಸರು, ಗುರು-ಗೋವಿಂದ ಭಟ್ಟರು, ಹಜರೇಶಾ ಖಾದ್ರಿ ಗುರುಗಳು ನೆಲೆಸಿರುವ ಭೂಮಿಯಾಗಿದೆ. ಇದೊಂದು ಪ್ರವಾಸಿ ತಾಣವಾಗಿದೆ, ಇಲ್ಲಿ ಎಂತೆಂಥವರು ಯಾವ್ಯಾವ ಅಧಿಕಾರದಲ್ಲಿದ್ದರು ಎಂಬುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ಅಧಿಕಾರವಿದ್ದಾಗ ಅಭಿವೃದ್ಧಿ ಮಾಡಬಹುದಿತ್ತು, ಈಗ ನಮ್ಮ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿಯವರನ್ನು ಕಾಲೆಳೆದರು.

ತಾಲೂಕಿನ ಪ್ರತಿ ಗ್ರಾಪಂಗೆ ನಮ್ಮ ಸಿಎಂ ಡಿ.ಕೆ. ಶಿವಕುಮಾರ ಅವರು, ಒಂದೊಂದು ಕೋಟಿ ರು.ಗಳ ಅನುದಾನ ನೀಡಿದ್ದಾರೆ. ಅದರಲ್ಲಿ ಆಯಾ ಗ್ರಾಪಂನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಪಂ, ಜಿಪಂ ಚುನಾವಣೆ ಬರುತ್ತಿವೆ, ನಾವು ನಿಮ್ಮ ಸೇವೆ ಮಾಡುತ್ತಿದ್ದೇವೆ, ನಮ್ಮ ಅಭ್ಯರ್ಥಿಗಳು ಯಾರೇ ಇದ್ದರೂ ಅವರಿಗೆ ಆಶೀರ್ವಾದ ಮಾಡಿ ಬಿಜೆಪಿ ಮುಕ್ತ ತಾಲೂಕನ್ನಾಗಿ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಾವೇದ್ ಅಹ್ಮದ್ ಸವಣೂರ, ಗುಡ್ಡಪ್ಪ ಜಲದಿ, ಯೂಸೂಬಸಾಬ್ ಭಾವಿಕಟ್ಟಿ, ಶಂಕರಗೌಡ್ರ ಪಾಟೀಲ, ಎಸ್.ಎಫ್. ಮಣಕಟ್ಟಿ, ಶಂಭು ಆಜೂರ, ಅಣ್ಣಪ್ಪ ಲಮಾಣಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು, ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಡಿಸೆಂಬರ್‌ 10ರಂದು ಸುವರ್ಣಸೌಧದ ಎದುರು ಉಪವಾಸ
ಜನಪ್ರತಿನಿಧಿಗಳ ಸ್ನೇಹಸಂಗಮಕ್ಕೆ ಸಾಕ್ಷಿಯಾದ ಹಾವೇರಿ