ಜಾನಪದ ಕಲಾ ವೈಭವ, ಜಾನಪದ ಕಲೆಗಳ ತರಬೇತಿ ಶಿಬಿರ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಜಾನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ನಮ್ಮ ಜನಪದರಿಂದ ಅನಾದಿಕಾಲದಿಂದ ಬಂದ ಬಹು ದೊಡ್ಡ ಸಾಮಾಜಿಕ ಆಸ್ತಿಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಜಿ.ಎನ್. ವಿಜಯಕುಮಾರ್ ಹೇಳಿದರು.
ತಾಲೂಕಿನ ದೇವನೂರಿನ ಶ್ರೀಲಕ್ಷ್ಮೀಶ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸಖರಾಯಪಟ್ಟಣ ಹೋಬಳಿ, ಕಡೂರು ತಾಲೂಕು ಹಾಗು ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಜಾನಪದ ಕಲಾ ವೈಭವ, ಜಾನಪದ ಕಲೆಗಳ ತರಬೇತಿ ಶಿಬಿರ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಾನಪದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹನೆ, ಪ್ರೀತಿ ಜಾತ್ಯಾತೀತ ಮನೋಭಾವನೆ ಮೂಡಿಸುವಲ್ಲಿ ಸಹಕಾರಿ ಯಾಗಿದೆ, ಸ್ವಾಸ್ಥ ಸದೃಢ ಸಮಾಜ ಕಟ್ಟಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯಲು ದೊಡ್ಡ ಸೇತುವೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್ ಮಾತನಾಡಿ, ಜಾನಪದ ಭಾರತೀಯ ಸಂಸ್ಕೃತಿ ತಾಯಿ ಬೇರಾಗಿದೆ, ಜಾನಪದ ಭಾರತೀಯರ ಆಹಾರ ಪದ್ಧತಿ, ವೇಷ ಭೂಷಣ, ಉಡುಗೆ, ತೊಡುಗೆ, ಸಾಹಿತ್ಯ ,ಕಲೆ, ಸಂಗೀತ, ಕೃಷಿ, ರಾಜಕೀಯ, ಕೈಗಾರಿಕೆ ವಾಣಿಜ್ಯ ವ್ಯಾಪಾರ ಸೇರಿದಂತೆ ಎಲ್ಲ ಕ್ಷೇತ್ರಗಳ ಭದ್ರ ಬುನಾದಿ. ಈ ಎಲ್ಲ ಕ್ಷೇತ್ರಗಳ ಸಾಧಕ ಬಾಧಕಗಳನ್ನು ಅನಾದಿ ಕಾಲದಿಂದಲೇ ನಮ್ಮ ಜನಪದರು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಜಾನಪದ ಎಲ್ಲ ಜನಾಂಗದವರ ಭಾಷೆ, ಸಾಹಿತ್ಯ, ಸಂಗೀತ ಕಲೆಗಳ ತಾಯಿ ಬೇರು. ಆದ್ದರಿಂದ ಇಂದಿನ ಯುವಕ ಯುವತಿಯರು, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾನಪದ ಕಲೆ, ಸಾಹಿತ್ಯ, ಸಂಗೀತಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಸಖರಾಯಪಟ್ಟಣ ಹೋಬಳಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮಲ್ಲಿಕಾರ್ಜುನಪ್ಪ ಕಾಮೇನ ಹಳ್ಳಿ ಮಾತನಾಡಿ, ನಮ್ಮ ಹೋಬಳಿಯಲ್ಲಿ ಹುಟ್ಟಿ ಬೆಳೆದ ಯಾವುದೇ ಜಾನಪದ ಕಲೆ ನಶಿಸಿ ಹೋಗದಂತೆ ಕ್ರಿಯಾಶೀಲವಾಗಿ ಕ್ರಮ ವಹಿಸುತ್ತೇನೆ ಎಂದರು.
ಚಿಕ್ಕನಲ್ಲೂರು ಜಯಣ್ಣ, ಗಾಯತ್ರಮ್ಮ, ವಸಂತ, ಶೈಲಜಾ, ಶಂಕರಪ್ಪ, ಷಣ್ಮುಖಪ್ಪ, ದಕ್ಷಿಣ ಮೂರ್ತಿ, ಪ್ರಾಂಶುಪಾಲರಾದ ಪುಟ್ಟಸ್ವಾಮಿ ನಾಯಕ್, ಮುಖ್ಯ ಶಿಕ್ಷಕ ಎನ್‌ಸಿ ಗುರುಮೂರ್ತಿ, ಸಾಹಿತಿ ಬಿಳಿಗಿರಿ ವಿಜಯಕುಮಾರ್, ತಿಪ್ಪೇಶ್,ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ನಾಗರಾಳು, ದೇವನೂರು, ಚಿಕ್ಕದೇವನೂರು ಗ್ರಾಮಸ್ಥರು ಉಪಸ್ಥಿತರಿದ್ದರು. 28ಕೆಕೆಡಿಯು3.