ಮಾಗಡಿ: ಕೆಂಪೇಗೌಡರ ಹೆಸರಿನಲ್ಲಿ ಮಾಡುವ ಉತ್ಸವದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡದೆ ಶಾಸಕ ಬಾಲಕೃಷ್ಣ ಅಗೌರವ ತೋರಿದ್ದಾರೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಹೆಸರಲ್ಲಿ ಮರಗಳ ನಾಶಕ್ಕೆ ಬಿಡಲ್ಲ: ಕೆಂಪೇಗೌಡ ಪ್ರತಿಮೆ ಪಕ್ಕದ ಉದ್ಯಾನವನದಲ್ಲಿರುವ ಮರಗಳು ಜನರಿಗೆ ನೆರಳು ನೀಡುತ್ತಿವೆ. ಅಭಿವೃದ್ಧಿ ಹೆಸರಲ್ಲಿ ಕಡಿಯಲು ಮುಂದಾಗಿದ್ದು, ಇದು ಶಾಸಕರಿಗೆ ಶೋಭೆ ತರಲ್ಲ. ತಾಲೂಕಿನ ಬಹುತೇಕರು ತಮ್ಮ ಕೆಲಸಗಳಿಗೆ ಬಂದು ವಿಶ್ರಾಂತಿ ಪಡೆಯುವ ಮರಗಳ ಕಡಿದರೆ ಸಾರ್ವಜನಿಕರ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಇಲ್ಲಿರುವ ಮರಗಳನ್ನು ಕಡಿಯಬಾರದು, ಕಡಿದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈ ಜಾಗ ಬಿಟ್ಟು ಬೇರೆಲ್ಲಾದರೂ ಅಭಿವೃದ್ಧಿ ಮಾಡಲಿ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪಕ್ಷದ ಶಾಸಕರೇ ಈ ರೀತಿ ತಪ್ಪು ಮಾಡಿದರೆ ಸರಿ ಬರುವುದಿಲ್ಲ ಎಂದು ಬಾಲಕೃಷ್ಣ ವಿರುದ್ಧ ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರರನ್ನು ಬೈಯುವುದು ಸರಿಯಲ್ಲ: ತಹಸೀಲ್ದಾರರು ತಾಲೂಕಿನ ಪ್ರಥಮ ಪ್ರಜೆ. ಉನ್ನತ ಮಟ್ಟದ ಅಧಿಕಾರಿ. ನಮ್ಮ ತಾಲೂಕನ್ನು ರಕ್ಷಿಸುವ ನಾಯಕರು. ಅವರಿಗೆ ಶಾಸಕ ಬಾಲಕೃಷ್ಣ ಸಾರ್ವಜನಿಕರ ಎದುರೇ ಬೈಯುವುದು ಸರಿಯಲ್ಲ. ಅವರಿಗೂ ಮನೆ, ಸಂಸಾರ, ಮಡದಿ, ಮಕ್ಕಳು, ತಂದೆತಾಯಿ ಇರುತ್ತಾರೆ. ಅವರು ನೊಂದುಕೊಳ್ಳುತ್ತಾರೆ. ಅಧಿಕಾರಿಗಳ ಕೈಯಲ್ಲಿ ಸೌಜನ್ಯವಾಗಿ ಕೆಲಸ ಮಾಡಿಸಬೇಕು. ಅದನ್ನು ಬಿಟ್ಟು ಸಾರ್ವಜನಿಕರ ಎದುರು ಬೈದರೆ ನಿಮ್ಮ ಘನತೆಯೇ ಹಾಳಾಗುವುದು ಎಂಬ ಎಚ್ಚರಿಕೆ ಇರಲಿ ಎಂದು ಸಲಹೆ ಮಾಡಿದರು.ದಲಿತ ಮುಖಂಡ ಮಾಡಬಾಳ್ ಜಯರಾಂ ಮಾತನಾಡಿ, ಕೆಂಪೇಗೌಡರ ಉತ್ಸವವನ್ನು ದೊಡ್ಡ ಮಟ್ಟದಲ್ಲಿ ಬಾಲಕೃಷ್ಣ ಮಾಡುತ್ತಿರುವುದು ಸಂತೋಷ. ಒಳ್ಳೆಯ ಬೆಳವಣಿಗೆ, ಆದರೆ ಕೆಂಪೇಗೌಡರ ಹೆಸರಲ್ಲಿ ಕಾರ್ಯಕ್ರಮ ಮಾಡಿ ಅವರ ಪ್ರತಿಮೆಗೆ ಒಂದು ಮಾಲಾರ್ಪಣೆ ಮಾಡದಿದ್ದರೆ, ಅವರಿಗೆ ಗೌರವ ಕೊಡದಿದ್ದರೆ ಇಷ್ಟು ಖರ್ಚು ಮಾಡಿ ಕಾರ್ಯಕ್ರಮ ಆಯೋಜಿಸಿದರು ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಈ ವೇಳೆ ಮುಖಂಡರಾದ ಬೆಳಗುಂಬ ಕೋಟಪ್ಪ, ದೊಡ್ಡಿ ಗೋಪಿ, ಆನಂದ್, ಹೇಮಂತ್, ಮೋಹನ್, ಸಯದ್, ರಂಗೇಗೌಡ ಸೇರಿದಂತೆ ರೈತ ಮುಖಂಡರು ಭಾಗವಹಿಸಿದ್ದರು.(ಫೋಟೋ ಕ್ಯಾಫ್ಷನ್)
ಮಾಗಡಿ ಪಟ್ಟಣದ ಕೆಂಪೇಗೌಡ ಪ್ರತಿಮೆಗೆ ಅಭಿಮಾನಿಗಳ ಜತೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ. ದಲಿತ ಮುಖಂಡ ಮಾಡಬಾಳ್ ಜಯರಾಂ, ಬೆಳಗುಂಬ ಕೋಟಪ್ಪ, ದೊಡ್ಡಿ ಗೋಪಿ ಇತರರಿದ್ದರು.