ತಾಲೂಕು ಆಡಳಿತದಿಂದ ಗಾಂಧೀ ಜಯಂತಿಯಲ್ಲಿ ಶಾಸಕ ಆನಂದ್ ಕನ್ನಡಪ್ರಭ ವಾರ್ತೆ. ಕಡೂರು ಸತ್ಯ ಮತ್ತು ಸರಳ ಜೀವನ ಅನುಸರಿಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಹಿಂಸಾ ಹೋರಾಟ ದಿಂದಲೂ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಚೇತನ ಎಂದು ಶಾಸಕ ಕೆ. ಎಸ್. ಆನಂದ್ ಬಣ್ಣಿಸಿದರು. ಕಡೂರು ತಾಪಂ ಸಭಾಂಗಣದಲ್ಲಿ ನಡೆದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿ, ಭಾರತದಲ್ಲಿ ಬ್ರಿಟೀಷರ ಗುಲಾಮಗಿರಿಯ ವಿರುದ್ಧದ ಸ್ವಾತಂತ್ರ್ಯಹೋರಾಟ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ವ್ಯಾಸಂಗ ಮುಗಿಸಿ ಬಂದ ನಂತರ ಹೆಚ್ಚು ತೀವ್ರತೆ ಪಡೆಯಿತು. ಇಡೀ ಪ್ರಪಂಚದ ಎಲ್ಲೆಡೆ ವಿವಿಧ ರೀತಿಯ ಹೋರಾಟ ನಡೆದಿದ್ದು, ಅಹಿಂಸಾ ಹೋರಾಟದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಏಕೈಕ ವ್ಯಕ್ತಿ ಗಾಂಧೀಜಿ ಎಂಬುದು ಸಂತಸದ ಸಂಗತಿ ಎಂದರು. ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಹಸಿವಿನಿಂದ ಯಾರೂ ಇರಬಾರದೆಂದು ಆಹಾರ ಕ್ರಾಂತಿ ಮಾಡಿದರು. ರೈತರ ಮತ್ತು ದೇಶದ ಸೈನಿಕರ ಮಹತ್ವ ತೋರಿಸಿಕೊಟ್ಟ ಕೀರ್ತಿ ಇಬ್ಬರೂ ದಿಗ್ಗಜರಿಗೆ ಸಲ್ಲುತ್ತದೆ. ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಮೂಲಕ ಕನಿಷ್ಠ ಅವರ ಮಾರ್ಗ ಅನುಸರಿಸುವ ಪ್ರಯತ್ನ ಮಾಡಿ, ಈ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಹೇಳಿದರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಭಾರತ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಮಹಾತ್ಮ ಗಾಂಧೀಜಿ ತಂದು ಕೊಟ್ಟಿರುವ ಸ್ವಾತಂತ್ರ ಭಾರತದ ಸ್ವಚ್ಛತೆಗೆ ಆದ್ಯತೆ ನೀಡಿದರು. ಅಲ್ಲದೆ ಸ್ವರಾಜ್ಯದ ಕಲ್ಪನೆ ಕೂಡ ಅವರದ್ದಾಗಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಈ ದೇಶದ ರೈತರ ಸೈನಿಕರ ಮಹತ್ವವನ್ನು ಜೈಜವಾನ್, ಜೈಕಿಸಾನ್ ಘೋಷಣೆ ಮಾಡಿ ಸರಳತೆ ಮೆರೆದ ಏಕೈಕ ಪ್ರಧಾನಿ. ಈ ನಿಟ್ಟಿನಲ್ಲಿ ಕಡೂರಿನ ಶಾಸಕರಾದ ಕೆ.ಎಸ್. ಆನಂದ್ ರವರಿಗೆ ಎಲ್ಲ ಅಧಿಕಾರಿಗಳು ಕೈಜೋಡಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ದುಡಿಯೋಣ ಎಂದು ಮನವಿ ಮಾಡಿದರು. ನಾಡ ಹಬ್ಬಗಳ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮತ್ತು ತಹಸೀಲ್ದಾರ್ ಕವಿರಾಜ್ ಮಾತನಾಡಿ, ಭಾರತಕ್ಕೆ ಕಾಳು ಮೆಣಸಿನ ವ್ಯಾಪಾರಕ್ಕೆ ಬಂದ ಬ್ರಿಟೀಷರು ಸುಮಾರು 200 ವರ್ಷಗಳ ಕಾಲ ಭಾರತೀಯರನ್ನು ಗುಲಾಮರಾಗಿಸಿದ್ದರು. ಇದರಿಂದ ಮುಕ್ತ ಗೊಳಿಸಲು ವಿವಿಧ ಹೋರಾಟಗಾರರು ಸೇರಿದಂತೆ ಗಾಂಧೀಜಿ ಅಸಹಕಾರ, ಅಹಿಂಸಾ ಚಳುವಳಿಗಳಿಂದ ಸ್ವಾತಂತ್ರ ಲಭಿಸಿತು ಎಂದರು. ತಾಪಂ ಮಾಜಿ ಅಧ್ಯಕ್ಷ ದಾಸಯ್ಯನ ಗುತ್ತಿ ಚಂದ್ರಪ್ಪ ಮಾತನಾಡಿ, ಗಾಂಧೀಜಿ, ಮಹಾನ್ ಸಂತರ ಜಯಂತಿ ಆಚರಣೆಗಳ ಮೂಲಕ ಇಂದಿನ ಯುವ ಪೀಳಿಗೆಗೆ ಹೋರಾಟದ ಮಹತ್ವ ತಿಳಿಸಬೇಕು ಎಂದರು. ಕಾರ್ಯಕ್ರಮದ ಬಳಿಕ ಗಾಂಧೀಜಿ ಯವರಿಗೆ ಇಷ್ಟವಾದ ಕಡಲೆಕಾಯಿಯನ್ನು ನೀಡಲಾಯಿತು. ಪುರಸಭೆ ಸದಸ್ಯರಾದ ಜ್ಯೋತಿ ಆನಂದ್, ಹಾಲಮ್ಮ,ದಾಸಯ್ಯನಗುತ್ತಿ ಚಂದ್ರಪ್ಪ, ವಿವಿಧ ಇಲಾಖೆಗಳ ಕಲ್ಮರುಡಪ್ಪ, ಎಚ್. ಡಿ ರೇವಣ್ಣ, ಡಾ.ರವಿಕುಮಾರ್, ಮಂಜುನಾಥ್,ಉಮೇಶ್,ವಿಜಯಕುಮಾರ್,ಲಿಂಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು. 2ಕೆಕೆಡಿಯು1. ಕಡೂರಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗಾಂಧಿ ಮತ್ತು ಲಾಲ ಬಹದೂರ್ ಶಾಸ್ತ್ರಿ ಜಯಂತಿ ಆಚರಣೆ ನಡಯಿತು.